ಜಿಲ್ಲೆ

ಒಕ್ಕಲಿಗರ ಮೀಸಲಾತಿ ಹೆಚ್ಚಿಸಿ, ಸರ್ಕಾರಕ್ಕೆ ಶ್ರೀ ರಮಣಾನಂದ ಸ್ವಾಮೀಜಿ ಆಗ್ರಹ

ನೆಲಮಂಗಲ: ಒಕ್ಕಲಿಗ ಸಮುದಾಯದ ಹಿತರಕ್ಷಣೆಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಬಸವನಹಳ್ಳಿ ಶಿವಾನಂದ ಆಶ್ರಮದ ಶ್ರೀ ರಮಣಾನಂದ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಬುಧವಾರ ಆಯೋಜಿಸಿದ್ದ ಮೀಸಲಾತಿ ಕುರಿತು ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಒಕ್ಕಲಿಗ ಸಮುದಾಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಮುದಾಯದ ಗಂಗರ ರಾಜಮನೆತನ 850ಕ್ಕೂ ಹೆಚ್ಚು ವರ್ಷಗಳ ಆಡಳಿತ ನಡೆಸಿದ ಇತಿಹಾಸ ಇದೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜೇಂದ್ರ ಅರಸು ಅವರ ಕಾಲದ ಗ್ರಾಮಾಂತರ ಜಿಲ್ಲೆಯ ಎಚ್.ಕೆ. ರಾಮಯ್ಯ ಅವರು ಒಕ್ಕಲಿಗ ಸಮುದಾಯ ಏಳಿಗೆಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ವಿವರಿಸಿದರು.

ಪ್ರಸ್ತುತ ರಾಜ್ಯಾದ್ಯಂತ ಶೇ.12 ಒಕ್ಕಲಿಗ ಸಮುದಾಯದವರು ಇದ್ದಾರೆ. 85ಕ್ಕೂ ಹೆಚ್ಚು ಉಪಜಾತಿಗಳನ್ನು ಅದು ಹೊಂದಿದೆ.

ಪ್ರತಿಯೊಂದು ಧರ್ಮ, ಜಾತಿ ಜನಾಂಗದಲ್ಲೂ ಬಡವರು ನಿರಾಶ್ರಿತರು ಇದ್ದಾರೆ. ಅದರಂತೆ ಒಕ್ಕಲಿಗ ಸಮುದಾಯದಲ್ಲೂ ಇದ್ದಾರೆ. ಅವರಿಗೆ ಮೀಸಲಾತಿ ಸೌಲಭ್ಯ ಇದೆ. ಈ ಸೌಲಭ್ಯವನ್ನು ಸರ್ಕಾರ ಸಮುದಾಯದವರ ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿ ಪ್ರತಿಯೊಂದಕ್ಕೂ ವಿಸ್ತರಿಸಬೇಕಿದೆ. ಆದ್ದರಿಂದ ಸಮುದಾಯದ ಎಲ್ಲ ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಮೀಸಲಾತಿ ಎಂದರೆ ದಲಿತರಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ಜಾತಿ, ಜಾನಾಂಗಕ್ಕೂ ಅದು ಅನ್ವಯ. ಗ್ರಾಮೀಣ ಭಾಗದಲ್ಲಿ ಒಕ್ಕಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದು, ಕೃಷಿಯನ್ನು ಅಧಾರಿಸಿದ್ದಾರೆ. ಕೆಲವರಿಗೆ ಸರ್ಕಾರದ ಸೌಲಭ್ಯಗಳು ದೊರೆಯದೆ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಈ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದರು.

ರಾಜ್ಯಾದ್ಯಂತ ಸ್ಥಳೀಯವಾಗಿ ಒಕ್ಕಲಿಗ ಸಮುದಾಯವನ್ನು ಸಂಘಟಿಸಲಾಗುತ್ತಿದೆ. 1930ರಲ್ಲಿ ಮಾಡಿದ್ದ ಸರ್ಕಾರ ಜಾತಿಗಣತಿ ಆಧರಿಸಿ, ಮೀಸಲಾತಿ ನೀಡಲಾಗುತ್ತಿದೆ. ಆದರೆ ಅದು ಸಾಲದಾಗಿರುವುದರಿಂದ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅಡೀಟರ್ ನಾಗರಾಜು ಆಗ್ರಹಿಸಿದರು.

ಹೋರಾಟ ಸಮಿತಿ ಸಂಚಾಲಕ ಎಚ್.ಜಿ.ರಾಜು, ಸದಸ್ಯ ಕೆ.ಎನ್. ಪುಟೇಗೌಡ, ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಎಂ. ನಾರಾಯಣ್‌ಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ರಂಗನಾಥ್, ಒಕ್ಕಲಿಗರ ಯುವ ವೇದಿಕ ಅಧ್ಯಕ್ಷ ಬಾಬು, ತಾಲೂಕು ಒಕ್ಕಲಿಗ ಸಂಘದ ಪ್ರಧಾನ ಪಿ. ಶೇಖರಪ್ಪ, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚನ್ನಯ್ಯ ಮತ್ತಿತರರು ಇದ್ದರು.