ಜಿಲ್ಲೆ

ಒಕ್ಕಲಿಗರ ಅಭ್ಯುದಯಕ್ಕೆ ರಾಮಯ್ಯ ಕೊಡುಗೆ ಅಪಾರ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ದೊಡ್ಡಬಳ್ಳಾಪುರ ಗ್ರಾಮಾಂತರ: ಕೆ.ಎಚ್.ರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸಹಕಾರ ಪಡೆದು, ಒಕ್ಕಲಿಗರ ಸಂಘದ ಮೂಲಕ ಬೃಹತ್ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿದ್ದರ ಪರಿಣಾಮ ಇಂದು ಸಮುದಾಯದ ಹೆಚ್ಚಿನ ಜನ ಸುಶಿಕ್ಷಿತರಾಗಲು ಸಾಧ್ಯವಾಯಿತು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಲ್ಲುದೇವನಹಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್.ರಾಮಯ್ಯ ಅವರ 142ನೇ ಜಯಂತಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಅವರ ದೇಹಾಂತ್ಯ ಆದಾಗ ಸ್ವಯಂ ನಾಲ್ವಡಿ ಕೃಷ್ಣರಾಜ ಒಡೆಯರೇ ಸಮಾಧಿ ನಿರ್ಮಿಸಿ, ಅದರ ಮೇಲೆ ಸಾಲು ಕೆತ್ತಿಸಿದ್ದಾರೆ. ಅಷ್ಟರಮಟ್ಟಿಗೆ ಮಹಾರಾಜರೊಂದಿಗೆ ರಾಮಯ್ಯ ಅವರ ಒಡನಾಟವಿತ್ತು. ಸ್ವಾಮಿ ವಿವೇಕಾನಂದರು, ಅಮೆರಿಕ ಪ್ರವಾಸ ಮುಗಿಸಿ ಅಂದಿನ ಮದ್ರಾಸಿಗೆ ಹಿಂತಿರುಗಿದಾಗ, ಅಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ರಾಮಯ್ಯ ಅವರು, ಸ್ವಾಮೀಜಿ ಅವರ ಪ್ರವಚನ ಏರ್ಪಡಿಸುತ್ತಿದ್ದರು. ಹೀಗಾಗಿ ಸ್ವಾಮೀಜಿ ಅವರ ನಿಕಟ ಸ್ನೇಹವೂ ರಾಮಯ್ಯ ಅವರಿಗೆ ಇತ್ತು ಎಂದರು.

ಮುಂದೆ ನಿನ್ನ ಸಮುದಾಯವನ್ನು ಸಂಘಟಿಸಿ, ಅದರ ಏಳಿಗೆಗಾಗಿ ಶ್ರಮಿಸು’ ಎಂಬ ಸ್ವಾಮೀಜಿ ಅವರ ಆಣತಿಯಂತೆ ರಾಜ್ಯಕ್ಕೆ ಹಿಂತಿರುಗಿದ ನಂತರ ಕೇಂದ್ರ ಒಕ್ಕಲಿಗರ ಸಂಘ ಸ್ಥಾಪಿಸಿ, ಅದರ ಏಳಿಗೆಗಾಗಿ ದುಡಿದರು. ಶ್ರೀಮಠಕ್ಕೆ ಭದ್ರ ಬುನಾದಿ ಹಾಕಿ ರಾಜ್ಯಾದ್ಯಂತ ಸಂಘವನ್ನು ಸ್ಥಾಪಿಸಿದರು ಎಂದರು.

ಶ್ರೀ ಮಠದಿಂದ ಸಮುದಾಯದ ಏಳಿಗೆಗೆ ಶ್ರಮಿಸಿದ 108 ಮಹಾಪುರುಷರ ಪರಿಚಯ ಪುಸ್ತಕಗಳನ್ನು ಹೊರತರಲಾಗುತ್ತಿದ್ದು, ಅದರ ಭಾಗವಾಗಿ ಪ್ರೊ.ಶಿವಣ್ಣ ಅವರು ರಚಿಸಿರುವ ಈ ಪುಸ್ತಕವನ್ನು ರಾಮಯ್ಯ ಅವರ ಜನ್ಮಸ್ಥಳವಾದ ಕಲ್ಲುದೇವನಹಳ್ಳಿಯಲ್ಲಿ ಅವರ ಜನ್ಮದಿನದಂದೇ ಬಿಡುಗಡೆ ಮಾಡಲಾಗಿದೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಬಮುಲ್ ಮಾಜಿ ನಿರ್ದೇಶಕ ಅಪ್ಯಯಣ್ಣ ಮತ್ತಿತರರಿದ್ದರು.