ಜಿಲ್ಲೆ

ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

Kodagu

ಸೋಮವಾರಪೇಟೆ: ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 10ಕ್ಕೆ ಹೆಚ್ಚಿಸಬೇಕು ಎಂದು ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಪರಿಶಿಷ್ಟ ಜಾತಿ ಮೀಸಲಾತಿಯನ್ನು 15ರಿಂದ 17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ಕ್ಕೆ ಹೆಚ್ಚಿಸಿರುವುದು ಶ್ಲಾಘನೀಯ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಒಕ್ಕಲಿಗ ಸಮುದಾಯದವರ ಸಂಕಷ್ಟದ ಬಗ್ಗೆ ಅರಿವಿದೆ. ಮೀಸಲಾತಿ ಹೆಚ್ಚಿಸಿದರೆ ಶೈಕ್ಷಣಿಕ ಕ್ಷೇತ್ರ ಮತ್ತು ಸರ್ಕಾರಿ ನೌಕರಿಗೆ ಉಪಯೋಗವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.


ಒಕ್ಕಲಿಗ ಸಮುದಾಯದವರು ಶೇ.70ರಷ್ಟು ಕೃಷಿಕರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ವಿಕೋಪದಿಂದ ಕೃಷಿ ಫಸಲು ಹಾನಿಯಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿ ಸಾಲದ ಹೊರೆಯಿಂದ ಬಡತನ ಏರುತ್ತಿದೆ. ಸಮುದಾಯ ಅಭಿವೃದ್ಧಿಯಾಗಬೇಕಾದರೆ ಮೀಸಲಾತಿ ಹೆಚ್ಚಳ ಅವಶ್ಯಕವಾಗಿದೆ. ಸಮುದಾಯದ ಶೇ.70ರಷ್ಟು ಜನ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.


ಕಾರ್ಯದರ್ಶಿ ಚೌಡ್ಲು ಯೋಗೇಂದ್ರ, ಖಜಾಂಚಿ ಪ್ರೀತಂ, ಸಂಘಟನಾ ಕಾರ್ಯದರ್ಶಿ ಎಚ್.ಕೆ.ಪ್ರಸಿ, ಪದಾಧಿಕಾರಿಗಳಾದ ದಿವಾಕರ್ ಕೂತಿ, ಎಚ್.ಕೆ. ತ್ರಿಶೂಲ್ ಇದ್ದರು.