ಜಿಲ್ಲೆ

ಒಕ್ಕಲಿಗ ಸಮಾಜಕ್ಕೆ ಎಚ್‌ಡಿಡಿ ಅಪಾರ ಕೊಡುಗೆ

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಒಕ್ಕಲಿಗ ಸಮಾಜಕ್ಕೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ಹಾಸನ ಜಿಲ್ಲಾ ಬಳಗದ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.
ಎಚ್.ಡಿ. ದೇವೇಗೌಡರು ಗ್ರಾಪಂ, ತಾಪಂ, ಜಿಪಂಗೆ ಮೀಸಲಾತಿಯನ್ನು ಕೊಟ್ಟಿದ್ದು, ಹೆದ್ದಾರಿಗಳು, ಬೆಂಗಳೂರಿನ ಮೆಟ್ರೋ ರೈಲು, ನೀರಾವರಿ ಯೋಜನೆ, ಸಾಲಮನ್ನಾ ಯೋಜನೆಯನ್ನು ನೀಡಿದ್ದರು. ಪಂಜಾಬಿನಲ್ಲಿ ದೇವೇಗೌಡರ ಹೆಸರನ್ನು ಭತ್ತದ ತಳಿಗೆ ಇಟ್ಟಿದ್ದಾರೆ. ರಾಗಿಮುದ್ದೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ ಎಂದು ಸ್ಮರಿಸಿದರು.

ಮೈಸೂರಿನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ದೇವೇಗೌಡರು ಒಕ್ಕಲಿಗ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಇದಲ್ಲದೆ ಎಚ್.ಸಿ. ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಸಹ ಒಕ್ಕಲಿಗ ಸಮಾಜಕ್ಕೆ ಕೆಲಸ ಮಾಡಿದ್ದಾರೆ. ಒಕ್ಕಲಿಗ ಸಮಾಜದ ನಾಯಕರಾದ ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಡಿ.ವಿ. ಸದಾನಂದಗೌಡ, ಎಚ್.ಡಿ. ಕುಮಾರಸ್ವಾಮಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಧಿಕಾರ ನಡೆಸಿದ್ದಾರೆ. ಅಧಿಕಾರ, ಐಶ್ವರ್ಯ ಯಾವುದೂ ಶಾಶ್ವತವಲ್ಲ. ಜಾತಿ ಹಿಂದೆ ಹೋದವರು ಯಾರೂ ಬೆಳೆದಿಲ್ಲ. ಆದ್ದರಿಂದ ಎಲ್ಲ ಸಮಾಜದವರನ್ನು ಪ್ರೀತಿಸಿದಾಗ ಮಾತ್ರ ಬೆಳೆಯಲು ಸಾಧ್ಯ ಎಂದರು.

ಶಾಸಕ ಎಸ್.ಎ. ರಾಮದಾಸ್, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮುಖಂಡರಾದ ಸಿ.ಜಿ. ಗಂಗಾಧರ್, ಡಾ.ಎಂ.ಬಿ. ಮಂಜೇಗೌಡ, ಬಾಲಾಜಿ ಶೇಖರ್, ಹಾಸನ ಜಿಲ್ಲಾ ಬಳಗದ ಅಧ್ಯಕ್ಷೆ ಪಿ. ಶಾರದಮ್ಮ, ಗೌರವ ಅಧ್ಯಕ್ಷ ಬಿ.ಬಿ. ರಾಮಕೃಷ್ಣ, ಉಪಾಧ್ಯಕ್ಷರಾದ ಮೋದಾಮಣಿ, ಪುಟ್ಟಸ್ವಾಮಿಗೌಡ, ಯಧುನಾಥ್, ರಾಮಚಂದ್ರ, ಪ್ರಧಾನ ಕಾರ್ಯದರ್ಶಿ, ಬಿ.ಬಿ. ರಂಗೇಗೌಡ ಇನ್ನಿತರರು ಇದ್ದರು.