ಜಿಲ್ಲೆ

ಒಂಬತ್ತು ಸಮುದಾಯ ಭವನಗಳ ಕಾಮಗಾರಿ ಪ್ರಗತಿಯಲ್ಲಿ

ಹನೂರು: ಕಳೆದ 3 ವರ್ಷದ ಅವಧಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ 9 ಸಮುದಾಯ ಭವನಗಳು ಮಂಜೂರಾಗಿದ್ದು, ಇದರಲ್ಲಿ ಕೆಲವು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಆರ್.ನರೇಂದ್ರ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು, ಹನೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 9 ಸಮುದಾಯ ಭವನಗಳು ಮಂಜೂರಾಗಿದೆ. ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಮಹದೇಶ್ವರ ಬೆಟ್ಟದ ಗಾಣಿಗ ಸಮುದಾಯ ಭವನಕ್ಕೆ 20 ಲಕ್ಷ ರೂ. ಮಂಜೂರಾಗಿದ್ದು, ಮೊದಲ ಕಂತಿನಲ್ಲಿ 12.5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಗತಿ ಗೋಡೆ ಹಂತದಲ್ಲಿದೆ. ಹನೂರಿನ ಕನಕ ಸಮುದಾಯ ಭವನಕ್ಕೆ ಮಂಜೂರಾದ 1 ಕೋಟಿ ರೂ. 37.50 ಲಕ್ಷ ರೂ. ಅನುದಾನ ನೀಡಿದ್ದು, ಮೊದಲ ಅಂತಸ್ತಿನ ಕಾಮಗಾರಿ ಪ್ರಗತಿಯಲ್ಲಿದೆ. ಹನೂರಿನ ಕೆಂಪೇಗೌಡ ಸಮುದಾಯ ಭವನಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದು, ಅಡಿಪಾಯದ ಹಂತದಲ್ಲಿದೆ. ಕುರುಬರದೊಡ್ಡಿಯ ಕನಕ ಸಮುದಾಯ ಭವನ ನಿರ್ಮಾಣಕ್ಕೆ 12.50 ಲಕ್ಷ ರೂ. ಅನುದಾನದಲ್ಲಿ ಛಾವಣಿ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ಹೂಗ್ಯಂನ ಕನಕ ಸಮುದಾಯ ಭವನಕ್ಕೆ 10 ಲಕ್ಷ ರೂ. ಅನುದಾನದಲ್ಲಿ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ. ಮಾರಳ್ಳಿ ಗ್ರಾಮದ ವೀರಶೈವ ಸಮುದಾಯ ಭವನಕ್ಕೆ 32.50 ಲಕ್ಷ ರೂ. ಅನುದಾನ ನೀಡಿದ್ದು, ಅಡಿಪಾಯದ ಕಾಮಗಾರಿ ಪ್ರಗತಿಯಲ್ಲಿದೆ ಇನ್ನು ಮಹದೇಶ್ವರ ಬೆಟ್ಟದ ಕನಕ ಸಮುದಾಯ ಭವನ ಪೂರ್ಣಗೊಂಡಿದೆ.

ಈ ಎಲ್ಲ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಮಂಜೂರಾದ 370 ಲಕ್ಷ ರೂ. ಅನುದಾನದಲ್ಲಿ 172.75 ಲಕ್ಷ ರೂ. ಹಣವನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಪ್ರಗತಿಯಲ್ಲಿರುವ ಸಮುದಾಯ ಭವನಗಳ ಕಟ್ಟಡದ ವರದಿ ಸಲ್ಲಿಕೆಯಾದ ನಂತರ ಅನುದಾನದ ಲಭ್ಯತೆ ಆಧಾರದ ಮೇಲೆ ಹಣ ಬಿಡುಗಡೆಗೊಳಿಸಿ ಅಪೂರ್ಣಗೊಂಡಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಉತ್ತರ ನೀಡಿದ್ದಾರೆ.