ಹನಗೋಡು: ಮಾನವೀಯತೆ ಮೌಲ್ಯವುಳ್ಳ ರಾಮಾಯಣ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ತಿಳಿದರು.
ಹನಗೋಡು ಹೋಬಳಿಯ ಮುತ್ತರಾಯನ ಹೊಸಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದು ಧರ್ಮಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಾಲ್ಮೀಕಿ ಅವರಿಂದ ಪಂಪ, ರನ್ನ, ಪೊನ್ನ, ಹರಿಹರ, ರಾಘವಾಂಕ ಮತ್ತಿತರ ಮಹಾನ್ ಕವಿಗಳು ಬೆಳಕಿಗೆ ಬರಲು ಕಾರಣವಾಯಿತು. ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ವಾಲ್ಮೀಕಿ ಅವರು ತೋರಿಸಿಕೊಟ್ಟಿದ್ದಾರೆ. ಇಂತಹ ಮಹನೀಯರಗಳನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸದೆ ಇವರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಕಲ್ಲಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ರಾಜನಾಯಕ, ವಕೀಲ ಸುರೇಶ್ ಹಾಜರಿದ್ದರು.
ಕಾರ್ಯಕ್ರಮವು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾದ್ದರಿಂದ ನಿಗದಿತ ಸಮಯಕ್ಕೆ ಹಾಜರಿದ್ದ ಶಾಸಕ ಎಚ್.ಪಿ.ಮಂಜುನಾಥ್ ಅವರು ಗ್ರಾಮದ ಮುಖಂಡರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದವರಿಂದ ಸನ್ಮಾನ ಸ್ವೀಕರಿಸಿ ತೆರಳಿದರು.