ಜಿಲ್ಲೆ

ಒಂದೇ ವಾರದಲ್ಲಿ 2,313 ಜನರಲ್ಲಿ ಸೋಂಕು

ಕಾರವಾರ: ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಜಾರಿ ನಡುವೆಯೂ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 2,313 ಜನರಲ್ಲಿ ಕೋವಿಡ್ ಖಚಿತವಾಗಿದೆ. 20 ಜನ ಮೃತಪಟ್ಟಿದ್ದಾರೆ. ಏ. 24ರಂದು ಜಿಲ್ಲೆಯ ಇದುವರೆಗಿನ ಸೋಂಕಿತರ ಸಂಖ್ಯೆ 17,035 ಇತ್ತು. ಈಗ ಅದರ ಪ್ರಮಾಣ 19,348ಕ್ಕೆ ಏರಿಕೆಯಾಗಿದೆ.

ಶನಿವಾರದ ವರದಿಯಂತೆ ಜಿಲ್ಲೆಯ 616 ಜನರಿಗೆ ಸೋಂಕು ಕಂಡುಬಂದಿದೆ. ಐವರು ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ 100, ಅಂಕೋಲಾದಲ್ಲಿ 127, ಕುಮಟಾದಲ್ಲಿ 114, ಭಟ್ಕಳದಲ್ಲಿ 65, ಶಿರಸಿಯಲ್ಲಿ 68, ಸಿದ್ದಾಪುರದಲ್ಲಿ 22, ಯಲ್ಲಾಪುರದಲ್ಲಿ 24, ಹಳಿಯಾಳ ಹಾಗೂ ದಾಂಡೇಲಿ ಸೇರಿ 53, ಜೊಯಿಡಾದಲ್ಲಿ 43 ಜನರಿಗೆ ಸೋಂಕು ಖಚಿತವಾಗಿದೆ. ಕಾರವಾರದಲ್ಲಿ ಇಬ್ಬರು, ಅಂಕೋಲಾ, ಕುಮಟಾ, ಶಿರಸಿಯಲ್ಲಿ ತಲಾ ಒಬ್ಬರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 276 ಜನ ಗುಣವಾಗಿದ್ದಾರೆ. 350 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,978 ಜನ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮೀಕ್ಷೆ ಆರಂಭ: ಕೋವಿಡ್ ಸಮುದಾಯಕ್ಕೆ ಹರಡಿದ್ದು, ಎಲ್ಲರನ್ನೂ ಪರೀಕ್ಷೆ ಮಾಡುವುದು ಕಷ್ಟ ಎಂದು ಜಿಲ್ಲಾಡಳಿತ ಮನಗಂಡಿದೆ. ರೋಗದಿಂದ ತೀವ್ರ ಸಮಸ್ಯೆಗೆ ಒಳಗಾಗುವವರನ್ನು ಗುರುತಿಸಿ ಅವರಿಗೆ ಆದ್ಯತೆ ಮೇಲೆ ಚಿಕಿತ್ಸೆ ನೀಡಿ ಜೀವ ಉಳಿಸಲು ಕ್ರಮ ವಹಿಸಲಾಗುತ್ತಿದೆ. ಇದರಿಂದ ಮೇ 1ರಿಂದ 5 ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಜ್ವರ, ಅಥವಾ ಇತರ ಕೋವಿಡ್ ಲಕ್ಷಣಗಳ ಬಗ್ಗೆ ಮಾಹಿತಿ ಪಡೆಯುವರು. ಅಲ್ಲದೆ, ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಜನರು ಮಾಹಿತಿ ನೀಡಿ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ ಮನವಿ ಮಾಡಿದ್ದಾರೆ.

ದಂಡ ಪ್ರಾರಂಭ: ಕೋವಿಡ್ ಕರ್ಫ್ಯೂ ಮೀರಿ ಬೆಳಗ್ಗೆ 10ರ ನಂತರ ಅನವಶ್ಯಕವಾಗಿ ಹೊರ ಬರುವವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಬೈಕ್​ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದಾರೆ. ಕಾರವಾರ ಶಹರದಲ್ಲೇ ಪ್ರತಿ ದಿನ 20 ಜನರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

45 ವರ್ಷದೊಳಗಿನವರಿಗಿಲ್ಲ ಲಸಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ 45 ವರ್ಷ ಕೆಳಗಿನವರಿಗೆ ಕೋವಿಡ್ ವ್ಯಾಕ್ಸಿನ್ ನೀಡುತ್ತಿಲ್ಲ. ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ವ್ಯಾಕ್ಸಿನ್ ಲಭ್ಯವಿದೆ. ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಖಾಲಿಯಾಗಿ ವಾರ ಕಳೆದಿದೆ. 45 ವರ್ಷ ಮೇಲ್ಪಟ್ಟವರಿಗೆ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳ ಲಸಿಕಾ ಕೇಂದ್ರದಲ್ಲಿ ಸರದಿ ಇರುತ್ತದೆ. ಜಿಲ್ಲೆಯಲ್ಲಿ ಶನಿವಾರ 15 ಸಾವಿರ ಡೋಸ್ ಲಭ್ಯವಿದ್ದು, ಇನ್ನಷ್ಟು ಡೋಸ್ ಬಂದ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜನ ಕೇಂದ್ರಗಳಿಗೆ ಬರುವುದು ಬೇಡ ಎಂಡು ಡಿಎಚ್​ಒ ಡಾ. ಶರದ್ ನಾಯಕ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.