ಹಾವೇರಿ: ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾಗೂ ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಹಾರ ವಿತರಣೆಗೆ ಒಂದೇ ಲಾಗಿನ್ ಐಡಿ ಬಳಸಿ, ಎಲ್ಲ ಲಾಗಿನ್ಗಳನ್ನು ಒಬ್ಬನೇ ಆಪರೇಟರ್ ಬಳಕೆ ಮಾಡಿ ಅನರ್ಹರಿಗೆ ಪರಿಹಾರ ನೀಡಿರುವುದು ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಸವಣೂರ ಉಪವಿಭಾಗದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಫೆ. 12 ಹಾಗೂ 13ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕಿನ ಕೆಲವು ಗ್ರಾಮಗಳ ಪರಿಶೀಲನೆ ಕೈಗೊಂಡ ಸಮಯದಲ್ಲಿ ಬೆಳೆ ಹಾನಿ ಪರಿಹಾರ ಪ್ರಕರಣಗಳನ್ನು ತಂತ್ರಾಂಶದಲ್ಲಿ ನಮೂದಿಸುವಾಗ ಅನರ್ಹ ಫಲಾನುಭವಿಗಳನ್ನು ನಮೂದಿಸಿರುವುದು ಕಂಡುಬಂದಿದೆ. ಈ ತಾಲೂಕುಗಳ ಪರಿಹಾರ ವಿತರಣೆಯ ಎಲ್ಲ ಪ್ರಕರಣಗಳ ದಾಖಲೆಗಳ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಒಂದೇ ಲಾಗಿನ್ ಐಡಿ ಬಳಕೆ: ಬೆಳೆ ನಷ್ಟ ಪರಿಹಾರ ವಿತರಣೆಗೆ ಭೂಮಿ ಉಸ್ತುವಾರಿ ಕೋಶ (ಬಿಎಂಸಿ) ಬೆಂಗಳೂರು ಇವರು ತಾಲೂಕುಗಳಿಗೆ 4ರಿಂದ 10 ಲಾಗಿನ್ಗಳನ್ನು ನೀಡಿದ್ದಾರೆ. ಈ ಎಲ್ಲ ಲಾಗಿನ್ಗಳನ್ನು ಒಬ್ಬನೇ ಆಪರೇಟರ್ ಬಳಸಿ ಅಥವಾ ಹಲವಾರು ಆಪರೇಟರ್ಗಳು ಒಂದೇ ಲಾಗಿನ್ ಐಡಿ ಬಳಸಿ ಕಾನೂನು ಸಮ್ಮತವಲ್ಲದ ವ್ಯಕ್ತಿಗೆ ಪರಿಹಾರ ವಿತರಣೆ ಮಾಡುವಲ್ಲಿ ಸಂಬಂಧಪಟ್ಟವರ ಜೊತೆ ಶಾಮೀಲಾಗಿರುವ ಸಾಧ್ಯತೆ ಇದೆ. ಅಲ್ಲದೆ, ಇದು ಕ್ರಿಮಿನಲ್ ಪಿತೂರಿ ಆಗಿದೆ ಎಂದು ಎಸಿಯವರು ತಮ್ಮ ಪರಿಶೀಲನಾ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಕ್ರಮ ನಡೆದದ್ದು ಹೀಗೆ: ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿ, ಆರ್ಐಗಳ ಸಹಕಾರದೊಂದಿಗೆ ನಾಲ್ಕೈದು ಯುವಕರು ಸೇರಿಕೊಂಡು ಒಂದೇ ಲಾಗಿನ್ ಐಡಿ ಬಳಸಿ ಅನರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದ್ದಾರೆ. ನಾಲ್ಕೈದು ಯುವಕರ ಗುಂಪು ಯಾವ ರೀತಿಯಾಗಿ ಕೆಲಸ ಮಾಡಿದೆ ಎಂದರೆ ಹಲವು ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಿದ್ದ ಲಾಗಿನ್ ಐಡಿ, ಪಾಸ್ವರ್ಡ್ಗಳನ್ನು ಇವರು ಪಡೆದಿದ್ದರು. ಒಂದು ಲ್ಯಾಪ್ಟಾಪ್ ಇಟ್ಟುಕೊಂಡು ಅವರೆಲ್ಲರ ಲಾಗಿನ್ ಐಡಿಗಳನ್ನು ಬಳಸಿ ತಮಗೆ ಬೇಕಾದವರ ಅಂದರೆ ಸ್ನೇಹಿತರು, ಸಂಬಂಧಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಸೈಬರ್ ಠಾಣೆಯವರು ಈ ಪ್ರಕರಣದ ಪೂರ್ಣ ತನಿಖೆ ನಡೆಸಿದರೆ ಕಂದಾಯ ಇಲಾಖೆಗೆ ಸಂಬಂಧವೇ ಇರದ ನಾಲ್ಕೈದು ಯುವಕರು ಬಲೆಗೆ ಬೀಳುವುದು ನಿಶ್ಚಿತ ಎನ್ನಲಾಗಿದೆ. ಅಲ್ಲದೆ, ಈ ಯುವಕರನ್ನು ಬಳಸಿಕೊಂಡು ಈ ಅಕ್ರಮಕ್ಕೆ ಯಾರು ಸಾಥ್ ನೀಡಿದ್ದಾರೆ ಎನ್ನುವುದು ತನಿಖೆಯಾಗಬೇಕಿದೆ.
ತಹಸೀಲ್ದಾರ್ಗಳು ಶಾಮೀಲು ಶಂಕೆ: ಜಿಲ್ಲೆಯಲ್ಲಿ ಜಮೀನು ಹೊಂದಿದ ರೈತನ ಬ್ಯಾಂಕ್ ಖಾತೆಯ ಬದಲು ಬೇರೆಯವರ ಖಾತೆಗೆ ಹಣ ಜಮೆಯಾದ 2,281ರಷ್ಟು ಪ್ರಕರಣಗಳು ಸದ್ಯ ಮೇಲ್ನೋಟದ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿವೆ. ಈ ಎಲ್ಲ ಪ್ರಕರಣಗಳಲ್ಲಿಯೂ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ಪರಿಹಾರಕ್ಕೆ ಅನುಮೋದನೆ ನೀಡಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ರೈತರಲ್ಲಿ 1 ಲಕ್ಷದಷ್ಟು ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಅದರಲ್ಲಿ ಪ್ರತಿ ತಾಲೂಕಿನಲ್ಲಿ ಸದ್ಯ ಬೆಳಕಿಗೆ ಬಂದಿರುವಂತೆ ನೂರಾರು ಪ್ರಕರಣಗಳು ಮಾತ್ರ ಇವೆ. ಇವುಗಳನ್ನಾದರೂ ತಹಸೀಲ್ದಾರ್ಗಳು ಪರಿಶೀಲಿಸಬೇಕಿತ್ತು. ತಮ್ಮ ಕೆಳಗಿನ ಸಿಬ್ಬಂದಿಯ ಮೇಲೆ ಕೆಲವರು ವಿಶ್ವಾಸವಿಟ್ಟು ಅಕ್ರಮದಲ್ಲಿ ಸಿಲುಕಿದರೇ ಅಥವಾ ತಾವೇ ಅಕ್ರಮಕ್ಕೆ ರಹದಾರಿ ಮಾಡಿಕೊಟ್ಟರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಹಾನಗಲ್ಲ, ಶಿಗ್ಗಾಂವಿಯಲ್ಲಿ 113 ಅನರ್ಹರಿಗೆ ಪರಿಹಾರ: ಎಸಿಯವರು ತಮ್ಮ ಪರಿಶೀಲನೆ ವೇಳೆಯಲ್ಲಿ ಹಾನಗಲ್ಲ ತಾಲೂಕಿನ ಹಸನಾಬಾದಿ ಗ್ರಾಮ ವ್ಯಾಪ್ತಿಯಲ್ಲಿ 12, ಶಿರಗೋಡ 20, ಮಾವಕೊಪ್ಪ 18 ಸೇರಿ ಒಟ್ಟು 50 ಹಾಗೂ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿಯಲ್ಲಿ 35, ಎನ್ಎಂ ತಡಸದಲ್ಲಿ 4, ಮುನವಳ್ಳಿಯಲ್ಲಿ 24ಪ್ರಕರಣಗಳು ಸೇರಿ ಒಟ್ಟು 63 ಅನರ್ಹ ಫಲಾನುಭವಿಗಳನ್ನು ನಮೂದಿಸಲಾಗಿದೆ ಎಂದು ವರದಿ ಮಾಡಿದ್ದಾರೆ.