ಭಾಲ್ಕಿ ಬಿಕೆಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇಮಕಾತಿ ಆದೇಶ ಪತ್ರ ನೀಡಿದರು. ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಡಿಸಿ ಗೋವಿಂದರಡ್ಡಿ, ಸಿಇಒ ಶಿಲ್ಪಾ ಎಂ., ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಇತರರಿದ್ದರು. 
ಜಿಲ್ಲೆ

ಒಂದೇ ದಿನ ೩೭೬೮ ಮಂದಿಗೆ ನೌಕರಿ

ಭಾಲ್ಕಿ: ಇಲ್ಲಿಯ ಭೀಮಣ್ಣ ಖಂಡ್ರೆ ತಂತ್ರಜ್ಞಾನ ಸಂಸ್ಥೆ(ಬಿಕೆಐಟಿ) ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಯುವಕರ ದಂಡೇ ಆಗಮಿಸಿತ್ತು. ಒಂದೇ ದಿನ ಈ ಮೇಳದಲ್ಲಿ ೩೭೬೮ ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೌಕರಿ ದೊರಕಿದೆ. ಇದು ಗಡಿ ಜಿಲ್ಲೆಯಲ್ಲಿ ದಾಖಲೆ ಎನಿಸಿದೆ.

ಬೆಂಗಳೂರು, ಹೈದರಾಬಾದ್, ಪುಣೆ ಸೇರಿ ವಿವಿಧೆಡೆಗಳಿಂದ ೯೩ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದವು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿಕೆಐಟಿ ಅಧ್ಯಕ್ಷ ಈಶ್ವರ ಖಂಡ್ರೆ ಅವರ ಆಸಕ್ತಿಯಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗ ಮೇಳ ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಇತರೆ ಅರ್ಹತೆಯುಳ್ಳ ೮೫೦೪ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದರು. ಅಂತಿಮವಾಗಿ ೩೭೬೮ ಜನರಿಗೆ ಕೆಲಸ ಸಿಕ್ಕಿದೆ.

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಪದವಿ ಪಡೆದ ನಂತರ ಕೆಲಸಕ್ಕೆ ವಿವಿಧೆಡೆ ಅಲೆದಾಡುತ್ತಿರುವ ಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಉಜ್ವಲ ಭವಿಷ್ಯಕ್ಕಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಲ್ಲೇ ಕೆಲಸ ಸಿಕ್ಕರೂ ಯುವಕರು ಹೋಗಬೇಕು. ಕೌಶಲ ತೋರಿಸಿ ದುಡಿಯುವ ಜತೆಗೆ ಆತ್ಮವಿಶ್ವಾಸವೂ ಬೆಳೆಸಿಕೊಳ್ಳಬೇಕು. ಬಡವರ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ದೊಡ್ಡ ವಿಜ್ಞಾನಿಗಳಾಗಿ ಶ್ರೀಮಂತರಾದ ಹಲವಾರು ಉದಾಹರಣೆಗಳಿವೆ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿ ಕೌಶಲ ಇದ್ದು, ಅದನ್ನು ಬಳಸಿಕೊಳ್ಳಬೇಕು ಎಂದರು.

ನಿರುದ್ಯೋಗಿ ಯುವಕರಿಗಾಗಿ ಸರ್ಕಾರ ಯುವನಿಧಿ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ ಉದ್ಯೋಗ ಸಿಗದ ನಿರುದ್ಯೋಗಿ ಯುವಕ-ಯುವತಿ ಪದವಿಧರರಿಗೆ ಮಾಸಿಕ ೩೦೦೦ ರೂ. ಹಾಗೂ ಡಿಪ್ಲೊಮಾದವರಿಗೆ ೧೫೦೦ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿದರು. ವಿವಿಧ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಚಿವರು ನೇಮಕ ಆದೇಶ ಪ್ರತಿ ನೀಡಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಕ್ಯಾಡ್ ಮ್ಯಾಕ್ಸ್ನ ವಿಜಯಕುಮಾರ, ಪ್ರಭಾಕರ, ಶರಣಕುಮಾರ ಮೋದಿ ಇತರರಿದ್ದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರ, ಬಿಕೆಐಟಿ, ಕ್ಯಾಡ್ ಮ್ಯಾಕ್ಸ್ ಬೆಂಗಳೂರು ಮತ್ತು ಇತರ ಕಂಪನಿಗಳ ಸಹಯೋಗದಡಿ ಮೇಳ ಹಮ್ಮಿಕೊಳ್ಳಲಾಗಿತ್ತು.

ಕೌಶಲ ತರಬೇತಿ ಕೇಂದ್ರ ಸ್ಥಾಪನೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಬೀದರ್‌ನಲ್ಲಿ ಬರುವ ದಿನಗಳಲ್ಲಿ ಕೌಶಲ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು. ಇದು ಶರಣರ ನಾಡು. ವಿಶ್ವಗುರು ಬಸವಣ್ಣನವರು ಹೇಳಿರುವಂತೆ ಕಾಯಕವೇ ಕೈಲಾಸ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಿ ಪ್ರಾಮಾಣಿಕವಾಗಿ ದುಡಿಯಬೇಕು. ಈ ಭಾಗದ ಯುವಕರಿಗೆ ದೇಶದ ಎಲ್ಲ ಭಾಗಗಳಲ್ಲಿ ಬೇಡಿಕೆ ಇದೆ. ಗಡಿ ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಮೇಳ ಆಯೋಜನೆ ಮಾಡಲಾಗಿದೆ ಎಂದರು.

ಕರೊನಾ ಸಂದರ್ಭದಲ್ಲಿ ಬಹಳಷ್ಟು ಉದ್ಯೋಗ ಕಡಿತವಾಗಿ ಜನರು ಪರದಾಡಬೇಕಾಯಿತು. ಇದೀಗ ಕೈಗಾರಿಕೆಗಳು ಸುಧಾರಣೆ ಕಂಡಿದ್ದು, ಉದ್ಯೋಗಗಳು ಸಿಗುತ್ತಿವೆ. ಯುವ ಶಕ್ತಿಯಿಂದಲೇ ಜಗತ್ತು ಭಾರತದ ಕಡೆ ನೋಡುತ್ತಿದೆ. ಬಿಕೆಐಟಿಯಲ್ಲಿ ಕಲಿತ ೧೨ ಸಾವಿರ ವಿದ್ಯಾರ್ಥಿಗಳು ಪ್ರಸ್ತುತ ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
|ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ, ಬಿಕೆಐಟಿ ಅಧ್ಯಕ್ಷ