ಜಿಲ್ಲೆ

ಒಂದೇ ದಿನ ಅಕ್ಕ-ತಮ್ಮ ಸಾವು

ಕೊಪ್ಪಳ: ಒಡಹುಟ್ಟಿದ ಸಹೋದರ, ಸಹೋದರಿ ಇಬ್ಬರು ಒಂದೇ ದಿನ ನಿಧನರಾಗಿದ್ದು, ಇಬ್ಬರ ಅಂತ್ಯಕ್ರಿಯೆ ಏಕಕಾಲಕ್ಕೆ ನಡೆಸಲಾಗಿದೆ.


ಕೊಪ್ಪಳದ ಮೆಹಬೂಬ್ ನಗರದ ನಿವಾಸಿ ಶಾಹೇದಾ ಬೇಗಂ(75) ವಯೋ ಸಹಜ ಕಾರಣದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಇವರ ಸಹೋದರ ದಿವಟರ್ ವೃತ್ತ ಸಮೀಪದ ನಿವಾಸಿ ಸೈಯ್ಯದ್ ಸಫ್ದರ್ ಅಲಿ(65) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಕುಟುಂಬದ ಇಬ್ಬರನ್ನು ಕಳೆದುಕೊಂಡ ಕುಟುಂಬದವರ ರೋಧನ ಮನಕಲುಕುವಂತಿತ್ತು.

ಮಕ್ಕಳಿಗೆ ಅರಬ್ಬಿ ಕಲಿಸುತ್ತಿದ್ದ ಶಾಹೇದಾ ಬೇಗಂ ಟೀಚರ್ ಎಂದೇ ಹೆಸರಾಗಿದ್ದಾರೆ. ಬಿಇಡಿ ಪದವಿಧರ ಸೈಯ್ಯದ್ ಅಲಿ ಸಹ ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದರು. ಸೈಯ್ಯದ್ ಮೃತದೇಹವನ್ನು ಸಹೋದರಿ ಶಾಹೇದಾ ಬೇಗಂ ಮನೆಗೆ ಕರೆತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶನಿವಾರ ಏಕಕಾಲಕ್ಕೆ ಇಬ್ಬರ ಅಂತ್ಯಕ್ರಿಯೆ ನೆರವೇರಿಸಲಾಯಿತು.