ಜಿಲ್ಲೆ

ಒಂದೇ ದಿನ 65 ಜನರಿಗೆ ಕರೊನಾ ಪಾಸಿಟಿವ್

ಕಾರವಾರ: ಜಿಲ್ಲೆಗೆ ಕರೊನಾ ವೈರಸ್ ಅಪ್ಪಳಿಸಿದ್ದು, ಒಂದೇ ದಿನ 65 ಜನರಿಗೆ ಕರೊನಾ ಖಚಿತವಾಗಿದೆ. ಒಟ್ಟಾರೆ ಜಿಲ್ಲೆಯ ಸೋಂಕಿತರ ಸಂಖ್ಯೆ 699ಕ್ಕೆ ಏರಿಕೆಯಾಗಿದೆ. ಭಟ್ಕಳ ಹಾಗೂ ಕುಮಟಾದಲ್ಲಿ ಮಂಗಳವಾರ 20 ಪ್ರಕರಣಗಳು ದಾಟಿವೆ. ರೋಗದ ಮೂಲ ಪತ್ತೆಯಾಗದೇ ಇರುವ ಹಲವು ಪ್ರಕರಣಗಳು ಪ್ರತಿ ದಿನ ಕಂಡುಬರುತ್ತಿದ್ದು, ಸೋಂಕು ಸಮುದಾಯಕ್ಕೆ ಹರಡುತ್ತಿರುವ ಮುನ್ನೆಚ್ಚರಿಕೆಯಾಗಿದೆ. ಭಟ್ಕಳದ 26, ಕುಮಟಾದ 23, ಹೊನ್ನಾವರದ 6, ಹಳಿಯಾಳದ 5, ಮುಂಡಗೋಡಿನ 2, ಕಾರವಾರ, ಅಂಕೋಲಾ, ಯಲ್ಲಾಪುರದ ತಲಾ ಒಬ್ಬರಲ್ಲಿ ಕೋವಿಡ್-19 ದೃಢಪಟ್ಟಿದೆ.

ಕುಮಟಾ ತಲ್ಲಣ: ಕಳೆದ ಮೂರು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಕರೊನಾ ಪ್ರಕರಣಗಳಿಂದ ಕುಮಟಾ ತಲ್ಲಣಗೊಂಡಿದೆ. ಹೊರ ಜಿಲ್ಲೆ, ರಾಜ್ಯದಿಂದ ಆಗಮಿಸಿರುವ 6 ಜನರಲ್ಲಿ ಹಾಗೂ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 16 ಜನರಲ್ಲಿ ಸೋಂಕು ಖಚಿತವಾಗಿದೆ. ಗುಂದ ಗ್ರಾಮದ ಏಳು ಜನರಿಗೆ, ಐಆರ್​ಬಿ ಒಬ್ಬ ಸಿಬ್ಬಂದಿಗೂ ಸೋಂಕು ಖಚಿತವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕುಮಟಾ ಹವ್ಯಕ ಸಭಾಭವನದಲ್ಲಿ ನಡೆದ ವೈದ್ಯರ ಪುತ್ರನ ವಿವಾಹದಲ್ಲಿ ಭಾಗವಹಿಸಿದ ಸಾಕಷ್ಟು ಜನರಲ್ಲಿ ಸೋಂಕು ಖಚಿತವಾಗುತ್ತಿದೆ. ವೈದ್ಯರು ಹಾಗೂ ಅವರ ಪತ್ನಿಗೂ ಸೋಂಕು ತಗುಲಿದ್ದು, ಇಬ್ಬರೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಕರ್ಣಕ್ಕೂ ಆತಂಕ: ಬೆಂಗಳೂರಿನಿಂದ ವಾಪಸಾದ ಗೋಕರ್ಣದ 70 ವರ್ಷದ ವೃದ್ಧ, ಹನೆಹಳ್ಳಿಯ ನಾಲ್ವರು ಯುವಕರು, ನಾಡು ಮಾಸ್ಕೇರಿಯ ವಕೀಲರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾರವಾರಕ್ಕೆ ವಿದೇಶದಿಂದ ವಾಪಸಾದ ಮಧ್ಯವಯಸ್ಕನಲ್ಲಿ ಸೋಂಕು ದೃಢಪಟ್ಟಿದೆ.

ಕರೊನಾಗೆ 65 ವರ್ಷದ ಮಹಿಳೆ ಬಲಿ
ಭಟ್ಕಳ ಪಟ್ಟಣದ ಸುಲ್ತಾನ ಸ್ಟ್ರೀಟ್​ನ 65 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಗಂಟಲ ದ್ರವದ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಂತರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಅದು ಪಾಸಿಟಿವ್ ಬಂದಿದೆ. ಪಟ್ಟಣದಲ್ಲಿ ಕಳೆದೆರಡು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.

ಕ್ಯಾನ್ಸರ್​ನಿಂದ ಮೃತಪಟ್ಟಾಕೆಗೂ ಕೋವಿಡ್ ದೃಢ
ದಾಂಡೇಲಿಯಲ್ಲಿ ಕ್ಯಾನ್ಸರ್​ನಿಂದ ಸೋಮವಾರ ಮೃತಪಟ್ಟ ಆಜಾದ್ ನಗರದ 46 ವರ್ಷದ ಮಹಿಳೆಯಲ್ಲೂ ಕರೊನಾ ದೃಢವಾಗಿದೆ. ಇವರು ಇಎಸ್​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಆಸ್ಪತ್ರೆ ಸೀಲ್​ಡೌನ್ ಆದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಮನೆಗೆ ಸಾಗಿಸಿದ ಆಂಬುಲೆನ್ಸ್ ಡ್ರೖೆವರ್, ಇಎಸ್​ಐ ಆಸ್ಪತ್ರೆಯ ಸಿಬ್ಬಂದಿಗೂ ರೋಗ ಬಂದಿರುವ ಅನುಮಾನದ ಮೇಲೆ ವೈದ್ಯರು ವೃದ್ಧೆಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದ್ದರು. ದಾಂಡೇಲಿಯಲ್ಲಿ ಸ್ವೀಪರ್ ಚಾಳ ಸೇರಿ ವಿವಿಧೆಡೆ 22 ಕ್ಕೂ ಅಧಿಕ ಪ್ರಕರಣಗಳು ಖಚಿತವಾಗಿದ್ದು, ಜು.15 ರ ಬುಲೆಟಿನ್​ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.