ಚಿಕ್ಕಬಳ್ಳಾಪುರ : ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸೋಮವಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಮೇಳದಲ್ಲಿ 42,576 ಜನರಿಗೆ ಲಸಿಕೆ ಹಾಕಿಸಿದ್ದು ರಾಜ್ಯದಲ್ಲಿ ಮೊದಲನೇ ಸ್ಥಾನ ಗಳಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ದಾಖಲೆ ಬರೆದಿದೆ.
ಲಸಿಕಾ ಮೇಳದಲ್ಲಿ ಚಿಕ್ಕಬಳ್ಳಾಪುರ ಮೊದಲನೇ ಸ್ಥಾನದಲ್ಲಿದ್ದು 51,882 ಲಸಿಕೆ ವಿತರಣೆ ಮಾಡಿರುವ ಮಂಡ್ಯ ದ್ವಿತೀಯ ಹಾಗೂ 37,366 ಲಸಿಕೆ ಹಾಕಿರುವ ಉತ್ತರ ಕನ್ನಡ ತೃತೀಯ ಸ್ಥಾನ ಪಡೆದಿದೆ. ಲಸಿಕಾ ಮೇಳದಲ್ಲಿ 30 ರಿಂದ 35 ಸಾವಿರ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಗುರಿ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,95,000 ಡೋಸ್ ಹಾಕಲಾಗಿದೆ. ಈ ಪೈಕಿ ಮೊದಲ ಡೋಸ್ ಲಸಿಕೆಯನ್ನು 3,30,588 ಮತ್ತು ಎರಡನೆಯ ಡೋಸನ್ನು 64,412 ಜನರು ಪಡೆದಿದ್ದಾರೆ. ಲಸಿಕಾ ಮೇಳ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲರೂ ಎರಡೂ ಡೋಸ್ ಲಸಿಕೆ ಪಡೆಯುವವರೆಗೆ ಲಸಿಕಾ ಮೇಳ ನಡೆಯಬೇಕು. ಈ ಹಿನ್ನೆಲೆಯಲ್ಲಿ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ 69 ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣದ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಚಿಂತಾಮಣಿ ಮುಂಚೂಣಿ : ಜಿಲ್ಲೆಯ ಆರು ತಾಲೂಕುಗಳ ಪೈಕಿ ಲಸಿಕೆ ವಿತರಣೆಯಲ್ಲಿ ಚಿಂತಾಮಣಿ ತಾಲೂಕು ಮುಂಚೂಣಿಯಲ್ಲಿದೆ. ನಗರದಲ್ಲಿ 1,476 ಮಂದಿಗೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 9,391 ಮಂದಿ ಸೇರಿ ಒಟ್ಟು 10,867 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಖೆ ಸಹಾಯಕ ನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.