ಬೀದರ್: ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟ ಮುಂದುವರಿದಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 274 ಜನರಿಗೆ ಸೋಂಕು ತಗುಲಿದೆ. ಇದು ಜಿಲ್ಲೆಯ ಈವರೆಗಿನ ( 2020ರ ಏಪ್ರಿಲ್ 1ರ ನಂತರ) ಒಂದೇ ದಿನ ಅತಿ ಹೆಚ್ಚು ಪಾಸಿಟಿವ್ ಸಂಖ್ಯೆ ದೃಢಪಟ್ಟ ದಾಖಲೆ ಎನಿಸಿದೆ.
ಕಳೆದೆರಡು ವಾರಗಳಿಂದ ಕರೊನಾ ಅಕ್ಷರಶಃ ಕಂಟ್ರೋಲ್ ತಪ್ಪಿದೆ. ಪ್ರತಿನಿತ್ಯ ನೂರು, ಇನ್ನೂರಕ್ಕೂ ಅಧಿಕ ಪಾಸಿಟಿವ್ ಪ್ರಕರಣ ವರದಿಯಾಗುತ್ತಿವೆ. ಏಪ್ರಿಲ್ ಆರಂಭದಿಂದ ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುತ್ತಿದ್ದು, ಎರಡನೇ ಅಲೆಗೆ ಸಿಲುಕಿರುವ ಜಿಲ್ಲೆ ಕೆಲವೇ ದಿನಗಳಲ್ಲಿ ದೊಡ್ಡ ಅಪಾಯದಲ್ಲಿ ಸಿಲುಕುವ ಮುನ್ಸೂಚನೆ ನೀಡಿದೆ.
ಹಿಂದಿನ ನಾಲ್ಕು ದಿನಗಳಲ್ಲಿ 879 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ದಾಖಲೆಯ 274 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗುರುವಾರ 200, ಬುಧವಾರ 193 ಹಾಗೂ ಮಂಗಳವಾರ 212 ಜನರಿಗೆ ಪಾಸಿಟಿವ್ ಬಂದಿದೆ. ಈಗಿನ ಈ ಬಹುಸಂಖ್ಯೆ ಏರುಗತಿ ಗಮನಿಸಿದರೆ ಮಹಾಮಾರಿ ಜಿಲ್ಲೆಯಲ್ಲಿ ಸಮುದಾಯದೊಳಗೆ ವ್ಯಾಪಿಸಿದಂತೆ ಕಾಣಿಸುತ್ತಿದೆ. ಇಂಥ ಸ್ಥಿತಿಯಲ್ಲೇ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಹಾಗೂ ಬೀದರ್ ನಗರಸಭೆ ಚುನಾವಣೆ ನಡೆಯುತ್ತಿದ್ದು, ರಾಜಕೀಯ ಚಟುವಟಿಕೆ ರಂಗೇರಿ ಜನಜಾತ್ರೆ ಸೇರುತ್ತಿರುವುದು ಇನ್ನಷ್ಟು ಗಂಡಾಂತರಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಮಾರ್ಚ್ 30ರಿಂದ ಈವರೆಗೆ ಜಿಲ್ಲೆಯಲ್ಲಿ 1900ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಈ ಅವಧಿಯಲ್ಲಿ ಐದು ಬಾರಿ ಒಂದೇ ದಿನ 200ಕ್ಕೂ ಜಾಸ್ತಿ ಕೇಸ್ ಬಂದಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ 1700ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಜನರ ಆತಂಕ ದ್ವಿಗುಣಗೊಳಿಸಿದೆ.
ಬ್ರಿಮ್ಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿವರೆಗೆ ಕೈಗೊಂಡ 3183 ಟೆಸ್ಟ್‌ಗಳಲ್ಲಿ 200 ಮಂದಿ ಹಾಗೂ ಶುಕ್ರವಾರ ರಾತ್ರಿವರೆಗೆ ನಡೆಸಿದ ಸುಮಾರು 2847 ಪರೀಕ್ಷೆಯಲ್ಲಿ 274 ಮಂದಿಗೆ ಸೋಂಕು ದೃಢಪಟ್ಟಿದೆ. ಎರಡನೇ ದಿನ 474 ಮಂದಿಗೆ ಸೋಂಕು ದೃಢಪಟ್ಟಿರುವುದು ಸಹಜವೇ ಮುಂದಿನ ಗಂಡಾಂತರದ ಸುಳಿವು ನೀಡಿದೆ.
ಕಳೆದೊಂದು ತಿಂಗಳಿಂದ ಕರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಒಂದು ವಾರದಿಂದಂತೂ ಪ್ರಕೋಪ ತೀವ್ರಗೊಂಡಿದೆ. ಈ ಅವಧಿಯಲ್ಲೇ 1900ಕ್ಕೂ ಹೆಚ್ಚು ಪಾಸಿಟಿವ್ ಪತ್ತೆಯಾಗಿವೆ. ನಿತ್ಯವೂ ಸರಾಸರಿ 160ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುತ್ತಿರುವುದು ತಲ್ಲಣಕ್ಕೆ ಕಾರಣವಾಗಿದೆ.
ಇಷ್ಟೊಂದು ಕ್ಷಿಪ್ರಗತಿಯಲ್ಲಿ ಕರೊನಾ ಹರಡುತ್ತಿದ್ದರೂ ಬಹುತೇಕ ಜನರು ಕೋವಿಡ್ ನಿಯಮ ಹಾಗೂ ಸರ್ಕಾರ, ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸುತ್ತಿಲ್ಲ. ಸಭೆ, ಸಮಾರಂಭ, ಸಮಾವೇಶ ಭರ್ಜರಿ ನಡೆದಿವೆ. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಜನಜಾತ್ರೆ ಸೇರುತ್ತಿದೆ. ಬಿಜೆಪಿ, ಕಾಂಗ್ರೆಸ್ನಿಂದ ದೊಡ್ಡ ದೊಡ್ಡ ಪ್ರಚಾರ ಸಭೆ ನಡೆಯುತ್ತಿದ್ದು, ಸಹಸ್ರಾರು ಜನರು ಸೇರುತ್ತಿದ್ದಾರೆ.