ಬಾಗಲಕೋಟೆ ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ವಿ.ಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. 
ಜಿಲ್ಲೆ

ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎಂದ ಸಿದ್ದರಾಮಯ್ಯ

ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಎರಡು ಕ್ಷೇತ್ರಕ್ಕೆ ನಿಲ್ಲುತ್ತಾರಾ ಎನ್ನುವ ಪ್ರಶ್ನೆಗೆ ಗರಂ ಆದ ಮಾಜಿ ಸಿಎಂ, ಯಾರ್ರೀ ಹೇಳಿದ್ದು? ನಾನೇನಾದರೂ ಹೇಳಿದ್ದೇನಾ? ನಾನು ಒಂದೇ ಕ್ಷೇತ್ರದಲ್ಲಿ ನಿಲ್ಲಲಾಗುವುದು ಎಂದು ಹೇಳಿಲ್ವಾ? ಎಂದು ಸಿದ್ದರಾಮಯ್ಯ ಚರ್ಚೆಗೆ ತೆರೆ ಎಳೆದಿದ್ದಾರೆ.
ಬುಧವಾರ ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಒಂದೇ ಕ್ಷೇತ್ರದಿಂದ ನಿಲ್ಲವುದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅದನ್ನೆ ಪುನಃ ಪುನಃ ನಾ ಏನು ಹೇಳಬೇಕು? ಉತ್ತರ ಕೊಡಲ್ಲ ಎಂದರು.
ನೀವೇ ಸುಮ್ಮನೆ ಅನುಮಾನ ಹುಟ್ಟು ಹಾಕಬೇಡಿ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ನಾವು ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ. ಸಿಎಂ ಯಾರು ಎಂದು ಹೊಸ ಶಾಸಕರು ಹಾಗೂ ಹೈಕಮಾಂಡ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.ಕಡಿಮೆ ಎಂದರೂ ೧೩೦ ಸೀಟು, ಅಧಿಕ ಎಂದರೆ ೧೫೦ ಸೀಟು ಬರುತ್ತೇವೆ ಎಂದ ಸಿದ್ದರಾಮಯ್ಯ, ಯಾಕ್ರೀ ನಿಮಗೆ ಅನುಮಾನ ಇದೆಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಎಂಟು ಸಲ ಗೆದ್ದ ನಾನು ಅಲೆಮಾರಿ ಏನ್ರಿ…?
ಎಂಟು ಸಲ ಗೆದ್ದಿದ್ದೇನೆ. ನನಗೆ ಅಲೆಮಾರಿ ಎಂದು ಹೇಳುತ್ತೀರಿ. ಬೇರೆ ಬೇರೆ ಕ್ಷೇತ್ರಗಳಲ್ಲಿ ನಿಲ್ಲುವುದು ಲೀಡರ್ ಅಲ್ವಾ? ನರೇಂದ್ರ ಮೋದಿ ಅವರು ಎರಡು ಕಡೆ ನಿಂತರೆ ಪಾಪುಲರ ಮ್ಯಾನ್, ಸಿದ್ದರಾಮಯ್ಯ ನಿಂತರೆ ಅನ್ಪಾಪುಲರ್ ಮ್ಯಾನ್ ಎಂದರೆ ಹೇಗೆ? ಜನ ಎಲ್ಲಿ ಪ್ರೀತಿ ಮಾಡುತ್ತಾರೆ ಅಲ್ಲಿ ನಿಲ್ಲುತ್ತೇನೆ. ಎಲ್ಲಿಯೇ ನಿಂತರೂ ಜನರ ಓಟು ಹಾಕಬೇಕಲ್ವಾ? ಜನರ ಆಶೀರ್ವಾದ ಬೇಕೇ ಬೇಕು. ಕಳೆದ ಸಲ ಎರಡೇ ದಿನ ಬಂದರೂ ಬಾದಾಮಿಯಲ್ಲಿ ಗೆಲ್ಲಲಿಲ್ವಾ? ಬಾದಾಮಿ ದೂರ ಆಗುತ್ತೆ ಎಂದು ಕೋಲಾರ ಎಂದಿದ್ದೇನೆ. ಹೈ ಕಮಾಂಡ ಒಪ್ಪಿದರೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಕಳೆದ ಸಲ ಚಾಮುಂಡಿಯಲ್ಲಿ ಸೋತೆ. ೧೯೯೧ರಲ್ಲಿ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದಾಗ ರಾಜೀವ ಗಾಂಧಿ ಸಾವನ್ನಪ್ಪಿದ್ದರಿಂದ ಅಲ್ಲಿ ಹತ್ತು ಸಾವಿರ ಮತಗಳ ಅಂತರದಲ್ಲಿ ಸೋತೆ ಎಂದರು.