ಬೀದರ್: ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕಗಳಿಗೆ ಬಂಡವಾಳ ಹೂಡಿಕೆ ಸಹಾಯಧನವನ್ನು ಹಿಂದಿನ ಕೈಗಾರಿಕೆ ನೀತಿ ವಿಧಾನದಲ್ಲಿ ಬಿಡುಗಡೆ ಮಾಡಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಆಗ್ರಹಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, 2020-25ರ ಹೊಸ ನೀತಿಯನ್ವಯ ಬಂಡವಾಳ ಹೂಡಿಕೆ ಸಹಾಯಧನ ಬಿಡುಗಡೆ ವಿಧಾನ ಕೈಗಾರಿಕೆಗಳ ಬೆಳವಣಿಗೆಗೆ ಮಾರಕವಾಗಿದೆ. ಕೈಗಾರಿಕೆ ಘಟಕದ ವಾರ್ಷಿಕ ವಹಿವಾಟು ಆಧರಿಸಿ ಪ್ರತಿವರ್ಷ ಶೇ.20 ಸಹಾಯಧನ ಬಿಡುಗಡೆ ಮಾಡುವುದರಿಂದ ಕೈಗಾರಿಕೆಗಳು ಹಣಕಾಸು ಸಂಸ್ಥೆ ಮೂಲಕ ಪಡೆದ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಹೊರೆ ಹೆಚ್ಚಾಗಲಿದೆ. ಹೀಗಾಗಿ ಪ್ರೋತ್ಸಾಹ ಬಂಡವಾಳ ಹೂಡಿಕೆ ಸಹಾಯಧನ ಬಿಡುಗಡೆ ವಿಧಾನವನ್ನು ಹಿಂದಿನ ಕೈಗಾರಿಕಾ ನೀತಿ ಮಾದರಿಯಲ್ಲಿ ಒಂದು ಅಥವಾ ಎರಡು ಕಂತಿನಲ್ಲಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.