ಜಿಲ್ಲೆ

ಒಂದು ವಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಕ್ಕರೆ, ಕಾನೂನು ಸಚಿವರು, ಕಬ್ಬು ಅಭಿವೃದ್ಧಿ ಆಯುಕ್ತರ ಜತೆ ಸಭೆ ನಡೆಸಿ ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸಲು ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಸಹಕರಿಸಬೇಕು ಎಂದು ಕೋರಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಪ್ರಮುಖ ಬೇಡಿಕೆಗಳು
ಪ್ರಸಕ್ತ ಸಾಲಿನ ಕಬ್ಬಿನ ದರ ಟನ್‌ಗೆ 4000 ರೂ. ನಿಗದಿ ಮಾಡಬೇಕು, ಕಬ್ಬಿನ ತೂಕದಲ್ಲಿ ಮೋಸ, ಕಬ್ಬು ಕಟಾವು ಕೂಲಿ, ಸಾಗಣೆ ವೆಚ್ಚವನ್ನು ರೈತರಿಂದ ಮನಬಂದಂತೆ ಸುಲಿಗೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಈ ವರ್ಷ ನಿಗದಿ ಮಾಡಿರುವ ಕಟಾವು ಕೂಲಿ 450 ರೂ.ಗಿಂತ ಹೆಚ್ಚುವರಿ ತೆಗೆದುಕೊಳ್ಳಬಾರದು.
ಸಕ್ಕರೆ ಕಾರ್ಖಾನೆಗಳು ಹಿಂದಿನ ವರ್ಷದ ಲೆಕ್ಕಪತ್ರ ಹಣಕಾಸಿನ ಬಾಕಿ ಉಳಿಸಿಕೊಂಡರೆ ಜಿಲ್ಲಾಧಿಕಾರಿಗಳು ಮುಂದಿನ ವರ್ಷಕ್ಕೆ ಕಬ್ಬನ್ನು ನುರಿಸಲು ಅನುಮತಿ ನೀಡಬಾರದು ಎನ್ನುವ ಕಾನೂನು ಪಾಲಿಸಬೇಕು. ಕಬ್ಬು ಒಪ್ಪಂದ ಮಾಡಿಕೊಂಡ ರೈತರಿಗೆ ಒಪ್ಪಂದ ಪತ್ರದ ಪ್ರತಿಯನ್ನು ರೈತರಿಗೆ ನೀಡಬೇಕು. ಒಪ್ಪಂದದ ಪ್ರಕಾರ 12 ತಿಂಗಳಿಗೆ ಕಬ್ಬನ್ನು ಕಟಾವು ಮಾಡಬೇಕು. ಕಟಾವು ವಿಳಂಬ ಮಾಡಿದರೆ ಬಡ್ಡಿ ಸೇರಿಸಿ ಪಾವತಿಸಬೇಕು.
ಹತ್ತಿಗೆ ಬೆಳೆ ವಿಮಾ ಪರಿಹಾರ ಬಂದಿಲ್ಲ, ಕೂಡಲೇ ನಷ್ಟದ ಪರಿಹಾರ ಕೊಡಿಸಬೇಕು, ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ 12 ಗಂಟೆಗಳ ವಿದ್ಯುತ್ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ರಸ್ತೆಯಲ್ಲಿ ಮೆರವಣಿಗೆ
ನಗರದ ಲಲಿತಮಹಲ್ ಅರಮನೆ ಮೈದಾನದ ಬಳಿಯಿಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಿ.ನರಸೀಪುರ ರಸ್ತೆ, ರಾಜ್‌ಕುಮಾರ್ ರಸ್ತೆ, ಟೆರೇಷಿಯನ್ ಕಾಲೇಜು ವೃತ್ತ ಎಡ ತಿರುವು, ಬನ್ನೂರು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಾಯಿತು.