ಹಾಸನ: ಪ್ರಸ್ತುತ ದೇಶದಲ್ಲಿ ಒಂದು ಮಿಲಿಯನ್ ಯೂನಿಟ್‌ಗಳಷ್ಟು ರಕ್ತದ ಕೊರತೆ ಇದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಪಿ ಮೋಹನ್ ಅವರು ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಬುಧವಾರ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ 12 ಮಿಲಿಯನ್ ಯೂನಿಟ್‌ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಆದರೆ ಸಂಗ್ರಹವಾಗುತ್ತಿರುವುದು 11 ಮಿಲಿಯನ್ ಯೂನಿಟ್‌ಗಳು ಮಾತ್ರ ಎಂದು ವಿಷಾದಿಸಿದರು.
ಭಾರತದಲ್ಲಿ ರಕ್ತದಾನ ಮಾಡುವವರ ಪ್ರಮಾಣ ಶೇ.1ರಷ್ಟು ಮಾತ್ರ. ಈ ಪ್ರಮಾಣವನ್ನು ಶೇ.1.5ಕ್ಕೆ ಹೆಚ್ಚಿಸಲು ಸಾಧ್ಯವಾದರೆ ಬೇಡಿಕೆಗೆ ತಕ್ಕಷ್ಟು ರಕ್ತ ದೊರೆಯಲಿದೆ. ದೇಶದಲ್ಲಿ 40 ಕೋಟಿಗೂ ಹೆಚ್ಚು ಜನ ರಕ್ತದಾನ ಮಾಡುವ ಅರ್ಹತೆ ಹೊಂದಿದ್ದರೂ ಸಾಕಷ್ಟು ಮಂದಿ ರಕ್ತ ನೀಡಲು ಹಿಂಜರಿಯುತ್ತಿದ್ದಾರೆ ಎಂದರು.
ಆರೋಗ್ಯದ ದೃಷ್ಟಿಯಿಂದಲೂ ರಕ್ತದಾನ ಮಾಡುವುದರಿಂದ ಸಾಕಷ್ಟು ಅನುಕೂಲಗಳಿವೆ ಎಂಬುದು ವೈದ್ಯಕೀಯ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಹೀಗಿದ್ದರೂ ಜನ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಜನರ ಮನೋಭಾವ ಬದಲಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಯುವ ಸಮೂಹ ಸ್ವತಃ ರಕ್ತದಾನ ಮಾಡುವ ಜೊತೆಗೆ ಬೇರೆಯವರಿಗೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಅಮೆರಿಕಾದಲ್ಲಿ ಶೇ.3ರಷ್ಟು ಮಂದಿ ರಕ್ತದಾನ ಮಾಡುತ್ತಾರೆ. ಆಫ್ರಿಕಾ ಖಂಡದ ದೇಶಗಳಲ್ಲಿನ ಪರಿಸ್ಥಿತಿ ಭಾರತಕ್ಕಿಂತ ನಿರಾಶಾದಾಯಕವಾಗಿದೆ. ಅಲ್ಲಿ ಕೂಡ ರಕ್ತದಾನ ಮಾಡಲು ಜನ ಹಿಂಜರಿಯುತ್ತಾರೆ. ರಕ್ತದ ಅಲಭ್ಯತೆಯ ಕಾರಣಕ್ಕೆ ಅಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ವಿವರಿಸಿದರು.
ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ನಾಗಲಕ್ಷ್ಮಿಅವರು ಮಾತನಾಡಿ, ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ದಿನ 30 ರಿಂದ 40 ಯೂನಿಟ್‌ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಡೆಂಗ್ಯೂ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾದಾಗ ಬೇಡಿಕೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದರು.
ಅತಿ ಅಪರೂಪದ ರಕ್ತದ ಗುಂಪಿಗೆ ಸೇರಿದ ರಕ್ತದಾನಿಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ದಾನಿಗಳನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.
ಶಿಬಿರದ ಮೂಲಕ 208 ಯೂನಿಟ್‌ಗಳಷ್ಟು ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ತೇರಾಪಂಥ್ ಯುವಕ ಪರಿಷತ್ ವತಿಯಿಂದ ಉಡುಗೊರೆಗಳನ್ನು ನೀಡಲಾಯಿತು.
ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಆರ್.ಮಧುಸೂದನ್ , ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಶಬ್ಬೀರ್ ಅಹಮದ್, ನಿರ್ದೇಶಕರಾದ ಉದಯ್ ಕುಮಾರ್, ಕೆ ಟಿ ಜಯಶ್ರೀ, ತೇರಾಪಂಥ್ ಯುವಕ ಪರಿಷತ್‌ನ ಅಧ್ಯಕ್ಷ ನಿತೇಶ್ ಸುರಾನ, ರಕ್ತದಾನ ಶಿಬಿರದ ಸಂಯೋಜಕರಾದ ಡಾ.ವೆಂಕಟೇಶ್ವರ ರಾವ್ ಕೊಲ್ಲಿ ಮತ್ತು ಎನ್.ಸುಷ್ಮಾ ಇತರರು ಇದ್ದರು.