ಕುಶಾಲನಗರ: ಸ್ವಾಮಿ ವಿವೇಕಾನಂದರು ಸಾಮಾಜಿಕ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿದ ದಾರ್ಶನಿಕ. ಇಂತಹ ಆಧ್ಯಾತ್ಮಿಕ ಚಿಂತಕ ಸ್ವಾಮಿ ವಿವೇಕಾನಂದ ಅವರನ್ನು ಒಂದು ದೇಶಕ್ಕೆ ಸೀಮಿತಗೊಳಿಸಬಾರದು ಎಂದು ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಹೇಳಿದರು.
ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಸಮೀಪದ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಪ್ರೇಮಕ್ಕಿಂತ ಹೆಚ್ಚಾಗಿ ಸ್ವಾರ್ಥ ಮನುಷ್ಯನಲ್ಲಿ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲಿ ಸಂಕುಚಿತ ಮನಸ್ಸು ಹೆಚ್ಚಾಗುತ್ತಿದ್ದುದನ್ನು ಅರಿತ ಸ್ವಾಮಿ ವಿವೇಕಾನಂದರು ಯುವ ಸಮೂಹ ಒಂದಾಗಬೇಕು ಎಂಬ ಸದಾಶಯ ಹೊಂದಿದ್ದರು. ಯುವಕರು ಮುಂದೆ ಬಂದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾರಿ ಹೇಳಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಇವರ ಆದರ್ಶಗಳನ್ನು ಯುವಕರು ಅನುಸರಿಸಬೇಕು ಎಂದು ತಿಳಿಸಿದರು.
ಯೋಗವಿಜ್ಞಾನ ವಿಭಾಗದ ಸಂಯೋಜಕ ಡಾ.ಜೆ.ಶಾಮಸುಂದರ ಮಾತನಾಡಿ, ಇಂದಿನ ಯುವಶಕ್ತಿ ಭವ್ಯ ಭಾರತದ ಮಹಿಮೆಯನ್ನು ಅರಿಯಬೇಕು. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತನೆ ಮಾಡಿಕೊಳ್ಳುವ ಸದಾಶಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು. ಅವರ ಅಧ್ಯಾತ್ಮ, ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನ್ಮ ದಿನಕ್ಕೆ ಅರ್ಥ ಕಲ್ಪಿಸಬೇಕು ಎಂದು ತಿಳಿಸಿದರು.
ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಐ.ಕೆ.ಮಂಜುಳಾ, ಡಾ.ಬಿ.ಎಸ್.ಗುಣಶ್ರೀ, ವಿವಿಧ ವಿಭಾಗದ ಉಪನ್ಯಾಸಕರು ಇದ್ದರು.