ಜಿಲ್ಲೆ

ಒಂದು ಟಿಕೆಟ್, 5 ಪ್ರವಾಸಿ ಸ್ಥಳ ಭೇಟಿ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಏಕೀಕೃತ ಟಿಕೆಟ್ (ಕಾಂಬೋ ಟಿಕೆಟ್) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.

ಏಕೀಕೃತ ಟಿಕೆಟ್ ವ್ಯವಸ್ಥೆ ಜಾರಿ ಕುರಿತು ಆಗಸ್ಟ್ 26ರಂದು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಾಂಬೋ ಟಿಕೆಟ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ.

ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು 5 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಬೃಂದಾವನಕ್ಕೆ ನೇರವಾಗಿ ತೆರಳಬಹುದು. ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು ಈ ಸ್ಥಳಗಳಲ್ಲಿ ಪ್ರವೇಶ ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಈ ವ್ಯವಸ್ಥೆ ಸೆ.20ರಂದು ಆರಂಭಗೊಂಡು ಅಕ್ಟೋಬರ್ 5ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ಟಿಕೆಟ್ ಬೆಲೆ 500 ರೂ. ಆಗಿದೆ. ಮಕ್ಕಳಿಗೆ ಟಿಕೆಟ್ ದರವನ್ನು 250 ರೂ. ನಿಗದಿಪಡಿಸಲಾಗಿದೆ.

ಏಕೀಕೃತ ಟಿಕೆಟ್ ಅನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ಕೆಎಸ್‌ಟಿಡಿಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ ಪಡೆದುಕೊಳ್ಳಬಹುದು. ಜತೆಗೆ, ಕೆಎಸ್‌ಆರ್‌ಟಿಸಿ ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಕೆ.ಆರ್.ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಟಿಕೆಟ್ ಲಭ್ಯ ಇರಲಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.