ಹಾನಗಲ್ಲ: ‘ಒಂದು ಜಿಲ್ಲೆ-ಒಂದೇ ಬೆಳೆ’ ಯೋಜನೆಯನ್ನು ಕೇಂದ್ರ ಸರ್ಕಾರ ಅಳವಡಿಸುತ್ತಿದ್ದು, ದೇಶದ 700 ಜಿಲ್ಲೆಗಳಲ್ಲಿ ಪೈಲೆಟ್ ಯೋಜನೆಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಗೆ ದೇಶದ 700 ಜಿಲ್ಲೆಗಳು ಆಯ್ಕೆಯಾಗಿವೆ. ಯಾವ ಜಿಲ್ಲೆಯಲ್ಲಿ ಯಾವ ಫಸಲು ಹೆಚ್ಚು ಬೆಳೆಯಲಾಗುತ್ತದೆ. ಅಂಥ ಜಿಲ್ಲೆಗಳ ಹವಾಮಾನಕ್ಕನುಗುಣವಾಗಿ, ಮೂಲ ಸೌಕರ್ಯ ಹಿನ್ನೆಲೆಯಲ್ಲಿ ಒಂದು ಫಸಲನ್ನು ಗುರುತಿಸಿ, ಅದನ್ನೇ ಹೆಚ್ಚು ಬೆಳೆಯಲು ರೈತರಿಗೆ ಸೂಚನೆ ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಅಲ್ಲದೆ, ಆಯಾ ಜಿಲ್ಲೆಯಲ್ಲಿ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ, ಕೃಷಿಗೆ ಪೂರಕವಾದ ಆಹಾರ ಉತ್ಪನ್ನ ತಯಾರಿಕೆ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬೈ-ಬೆಂಗಳೂರು ಕಾರಿಡಾರ್: ಮುಂಬೈ-ಬೆಂಗಳೂರು ಕಾರಿಡಾರ್ ವ್ಯಾಪ್ತಿಯಲ್ಲಿ ಔದ್ಯೋಗೀಕರಣ ಸೃಷ್ಟಿಸುವ ಉದ್ದೇಶದಿಂದ ಈ ಮಾರ್ಗದಲ್ಲಿರುವ ಎಲ್ಲ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಾವೇರಿ, ಗದಗ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ 1 ಸಾವಿರ ಎಕರೆ ಪ್ರದೇಶ ಗುರುತಿಸಲಾಗುತ್ತಿದೆ. ಈ ವಲಯದಲ್ಲಿ ಫುಡ್ ಪಾರ್ಕ್ ಸ್ಥಾಪಿಸಲಾಗುತ್ತಿದ್ದು, ಗೋದಾಮು ನಿರ್ವಿುಸಿ ರೈತರ ಫಸಲನ್ನು ದಾಸ್ತಾನು ಮಾಡಲಾಗುವುದು ಎಂದು ಉದಾಸಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ: ದೇಶಾದ್ಯಂತ ನೂತನ ಕೌಶಲ ಆಧಾರಿತ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಆಮೂಲಾಗ್ರ, ಪರಿಣಾಮಕಾರಿಯಾಗಿ ಬದಲಾವಣೆ ತರಲಾಗುತ್ತಿದೆ. ಕೌಶಲಾಧಾರಿತ ಪಠ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ದೇಶದ ಪುರಾತನ ಸಂಸ್ಕೃತಿ, ಇತಿಹಾಸ ವಿಷಯಗಳನ್ನೊಳಗೊಂಡ ಶಿಕ್ಷಣ ಪದ್ಧತಿ ಮುಂದಿನ ಮೂರು ವರ್ಷಗಳಲ್ಲಿ ಜಾರಿಯಾಗಲಿದೆ. ಸ್ವಯಂ ಉದ್ಯೋಗ ಸೃಷ್ಟಿಗೆ ಪೂರಕವಾದ ಶಿಕ್ಷಣ ನೀಡುವ ಅಗತ್ಯತೆ ಇರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಶಿಕ್ಷಣ ತಜ್ಞ ಕಸ್ತೂರಿರಂಗನ್ ವರದಿಯನ್ವಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುತ್ತಿದೆ. ಇದರಿಂದ ಭಾರತ ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ-ಔದ್ಯೋಗಿಕ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದೇಶದ ಯುವ ಸಮೂಹ ಬೆಳೆದು ದೇಶವನ್ನು ಮುನ್ನಡೆಸಬೇಕಿದೆ ಎಂದು ತಿಳಿಸಿದ್ದಾರೆ.