ಕೆ.ಎಂ.ದೊಡ್ಡಿ: ಸೂಳೆಕೆರೆ ನಾಲಾ ವ್ಯಾಪ್ತಿಯ ಅಣ್ಣೂರು ಗ್ರಾಮದ ದೊಡ್ಡಾಣಿ ಪೈಪ್ ಲೈನ್ ಆಧುನಿಕರಣ ಹಾಗೂ ರಸ್ತೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ತಿಳಿಸಿದರು.
ಸಮೀಪದ ಅಣ್ಣೂರು ಗ್ರಾಮಕ್ಕೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೂಡಿ ಆಗಮಿಸಿ ಸೂಳೆಕೆರೆ ನಾಲಾ ವ್ಯಾಪ್ತಿಯ ದೊಡ್ಡಾಣಿ ಪೈಪ್ ಲೈನ್ ರಸ್ತೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಮಾತನಾಡಿದರು.
ಸೂಳೆಕೆರೆ ನಾಲಾ ವ್ಯಾಪ್ತಿ ದೊಡ್ಡಾಣಿ ಪೈಪ್‌ಲೈನ್ ನಾಲೆ ಆಧುನಿಕರಣ ಹಾಗೂ ರಸ್ತೆ ಅಭಿವೃದ್ಧಿಯಾಗದೆ ತೊಂದರೆಯಾಗಿತ್ತು. ಗ್ರಾಮಸ್ಥರು, ರೈತರು ಸ್ಮಶಾನಕ್ಕೆ ಹೋಗುವುದ್ದಕ್ಕೆ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಮಸ್ಯೆಯಾಗಿತ್ತು.
ವಾಹನ ಸವಾರರು, ಎತ್ತಿನಗಾಡಿಯಲ್ಲಿ ಕಬ್ಬು ತುಂಬಿಕೊಂಡು ಬರುವ ರೈತರು, ಗ್ರಾಮಸ್ಥರು ಹಾಗೂ ಮುಖಂಡರು ಮನವಿ ಮಾಡಿದ್ದರು. ಶೀಘ್ರದಲ್ಲೇ ಒಂದು ಕೋಟಿ ರೂ. ಅನುದಾನದಲ್ಲಿ ದೊಡ್ಡಾಣಿ ಪೈಪ್ ಲೈನ್ ಕಾಲುವೆಯನ್ನು ಸುಸಜ್ಜಿತವಾಗಿ ಆಧುನಿಕರಣಗೊಳಿಸಿ, ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಲು ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜು, ಸದಸ್ಯರಾದ ಪಿಣ್ಣ ಸತೀಶ್ , ಚಂದ್ರಶೇಖರ, ಸೊಸೈಟಿ ಅಧ್ಯಕ್ಷ ಪ್ರಸನ್ನ , ವೀರೇಂದ್ರ , ರಾಮಣ್ಣ ಇತರರು ಇದ್ದರು.