ಜಿಲ್ಲೆ

ಐಸ್‌ಕ್ರೀಂ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

ಚಾಮರಾಜನಗರ: ಚಾಮರಾಜನಗರ ಹಾಲು ಒಕ್ಕೂಟ(ಚಾಮುಲ್) ದಲ್ಲಿ ಐಸ್ ಕ್ರೀಂ ಘಟಕ ಸ್ಥಾಪನೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ ಹಾಗೂ ಜಿಲ್ಲೆಯ ಹಾಲು ಉತ್ಪಾದಕರಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು, ಸುಲ್ತಾನ್ ಷರ್ೀ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಶ್ರೀಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಚಾಮುಲ್ ಆಡಳಿತ ಮಂಡಳಿ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈಗಾಗಲೇ ಚಾಮುಲ್‌ಗೆ ಇರುವ ಸಾಲವನ್ನು ತೀರಿಸದೇ ಮತ್ತೆ ಖಾಸಗಿ ಬ್ಯಾಂಕ್‌ನಿಂದ 40 ಕೋಟಿ ರೂ, ಸಾಲವನ್ನು ಪಡೆದು ಐಸ್‌ಕ್ರೀಂ ಘಟಕ ಸ್ಥಾಪನೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ. ಈ ಮೂಲಕ ರೈತರು ಉತ್ಪಾದಿಸುವ ಹಾಲಿನ ಮೇಲೆ ಸಾಲಪಡೆದಂತಾಗುತ್ತದೆ. ಈಗಾಗಲೇ ಮಾರುಕಟ್ಟೆ ವ್ಯವಸ್ಥೆಯನ್ನು ಸುಭದ್ರಗೊಳಿಸುವಲ್ಲಿ ವಿಲವಾಗಿರುವ ಚಾಮುಲ್ ಐಸ್ ಕ್ರೀಂ ಘಟಕವನ್ನು ಸ್ಥಾಪಿಸುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಭ್ರಷ್ಟಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಪ್ರಸ್ತುತ ಚಾಮುಲ್‌ನಿಂದ ಕೇರಳಕ್ಕೆ 16 ಸಾವಿರ ಲೀಟರ್ ಹಾಲು ಹಾಗೂ ತಮಿಳುನಾಡಿಗೆ 5 ಸಾವಿರ ಲೀಟರ್ ಹಾಲು ಮಾರಾಟವಾಗುತ್ತದೆ. ಇವರು ಏನಾದರೂ ಹಾಲು ತೆಗೆದುಕೊಳ್ಳದಿದ್ದರೇ ಮಾರುಕಟ್ಟೆ ವ್ಯವಸ್ಥೆ ಹದಗೆಡುತ್ತದೆ. ರೈತರಿಗೆ ನೀಡುವ ಹಾಲಿಗೆ 1 ರೂ, ಕಡಿಮೆ ಮಾಡಿ ಅದರಿಂದ ಬಂದ 3 ಕೋಟಿ ರೂ, ಲಾಭವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೋನಸ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಗುತ್ತಿಗೆ ನೌಕರರಿಗೆ ಸಂಬಳ ಕೊಡುವ ನೆಪದಲ್ಲಿ ನೌಕರರಲ್ಲದ ವ್ಯಕ್ತಿಗಳಿಗೆ ಸಂಬಳ ನೀಡಲಾಗುತ್ತಿದೆ. ಚಾಮುಲ್‌ನಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದ್ದು, ಐಸ್‌ಕ್ರೀಂ ಘಟಕ ಸ್ಥಾಪನೆಯಿಂದ ಮತ್ತಷ್ಟು ವಂಚನೆಯಾಗಲಿದೆ. ಇದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಚಾಮುಲ್ ನಿರ್ದೇಶಕ ವೈ.ಸಿ.ನಾಗೇಂದ್ರ, ರೈತ ಸಂಘದ ಮೂಕಳ್ಳಿ ಮಹದೇವಸ್ವಾಮಿ, ನಂದೀಶ್, ನವೀನ್, ಅಂಬಳೆ ಶಿವಕುಮಾರ್, ಶಿವರುದ್ರ, ಚಂಗಡಿ ಕರಿಯಪ್ಪ, ಚಿಕ್ಕಬಸಪ್ಪ, ಪ್ರೇಮಾ, ಸುಮಿತ್ರಾ, ರಾಣಿ, ಸುಮತಿ, ಚೆನ್ನಮಲ್ಲಪ್ಪ, ಸುನಂದಾ, ಲೋಕೇಶ್, ಮಹದೇವಯ್ಯ, ಸಿದ್ದರಾಜು, ಮಹೇಂದ್ರ, ಗವಿಯಪ್ಪ, ಸಿದ್ದರಾಜು, ಮಹದೇವಯ್ಯ, ಶಂಕರಪ್ಪ, ಮಹೇಶ್, ನಾಗರಾಜು ಹಾಗೂ ಇತರರು ಹಾಜರಿದ್ದರು.