ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ 
ಜಿಲ್ಲೆ

ಐಸಿರಿ ಸ್ಟೀಲ್ ಬ್ಯಾಂಕ್ ಉದ್ಘಾಟನೆ ಆ. ೨೮ಕ್ಕೆ

ಚಿಕ್ಕಮಗಳೂರು: ಕಲ್ಯಾಣ ನಗರದ ಬಸವತತ್ವ ಪೀಠದ ಆವರಣದಲ್ಲಿ ಬೆಂಗಳೂರಿನ ಅದಮ್ಯ ಚೇತನ ಹಾಗೂ ಐಸಿರಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆ. ೨೮ರಂದು ಸಂಜೆ ೬ ಗಂಟೆಗೆ ಐಸಿರಿ ಸ್ಟೀಲ್ ಬ್ಯಾಂಕ್ ಉದ್ಘಾಟನೆ ಹಾಗೂ ಐಸಿರಿ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಭರವಸೆ ಮತ್ತು ಸುಧಾರಣೆ ಕಾರ್ಯದ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡು ವಿವಿಧ ಆಯಾಮದಲ್ಲಿ ಈಗಾಗಲೇ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಐಸಿರಿ ಪರ್ಸ್ಪೆಕ್ಟಿವ ಎಂಬ ಆಯಾಮದಡಿ ಜ್ಞಾನ ಶಿಬಿರ, ಐಸಿರಿ ಸಸ್ಟೇನೆಬಿಲಿಟಿ ಎಂಬ ಆಯಾಮದಡಿಯಲ್ಲಿ ಹಸಿರು, ಸಮರ್ಥನೀಯ ಭವಿಷ್ಯಕ್ಕೆ ಐಸಿರಿ ಇಂಡಿಯಾ ಆಯಾಮದಡಿ ನಾಗರಿಕ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಗಣ್ಯ ವ್ಯಕ್ತಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಅನಂತ ಪ್ಲೇಟ್ ಬ್ಯಾಂಕ್‌ನ ೨೭ನೇ ಘಟಕ ಇದಾಗಿದೆ. ಈಗಾಗಲೇ ೨ ಸಾವಿರ ಸ್ಟೀಲ್ ತಟ್ಟೆಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ ಎಂದು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಮತ್ತು ರಂಗಕರ್ಮಿಯಾಗಿ ಕಲಾಸೇವೆಯನ್ನು ಸಲ್ಲಿಸುತ್ತಿರುವ ಟಿ.ಎಸ್. ನಾಗಾಭರಣ ಹಾಗೂ ಸಾಮಾಜಿಕ ಕಾರ್ಯಕರ್ತೆ ಹಸಿರು ಭಾನುವಾರ ಸಮಾಜದ ಹಿತಕ್ಕಾಗಿ ನಿತ್ಯ ಅನ್ನದಾನ ಸೇವೆ ಸಲ್ಲಿಸುತ್ತಿರುವ ಅಧಮ್ಯ ಚೇತನ ಸಂಸ್ಥೆಯ ಅಧ್ಯಕ್ಷರೂ, ಸಂಸ್ಥಾಪಕರೂ ಆದ ತೇಜಸ್ವಿನಿ ಅನಂತಕುಮಾರ್, ಶಾಸಕ ಎಚ್.ಡಿ. ತಮ್ಮಯ್ಯ, ಲೈಫ್‌ಲೈನ್ ಫೀಡ್ಸ್ನ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ, ನಗರಸಭಾಧ್ಯಕ್ಷೆ ಶೀಲಾದಿನೇಶ್, ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಐವರು ಸಾಧಕರಿಗೆ ಐಸಿರಿ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಟಿ.ಎಸ್. ನಾಗಾಭರಣ, ತೇಜಸ್ವಿನಿ ಅನಂತಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಣಾಪುರ, ವೈಲ್ಡ್ ಕ್ಯಾಟ್-ಸಿ ಸಂಸ್ಥಾಪಕ ಡಿ.ವಿ ಗಿರೀಶ್ ಹಾಗೂ ಶಿವಮೊಗ್ಗದ ಸಮನ್ವಯ ಟ್ರಸ್ಟ್ ಸಂಸ್ಥಾಪಕ ಸಮನ್ವಯ ಕಾಶಿ ಅವರನ್ನು ಐಸಿರಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನಾಗಶ್ರೀ ತ್ಯಾಗರಾಜ್ ಅವರ ಪದ್ಮಪತ್ರೆ, ಹುಳಿಗೆರೆ ಮಲ್ಲಿಕಾರ್ಜುನ್ ಅವರ ಒನ್ ಮಿನಿಟ್ ಪ್ಲೀಸ್ ಕೃತಿಗಳು ಲೋಕಾರ್ಪಣೆಯಾಗಲಿವೆ ಎಂದು ತಿಳಿಸಿದರು.

ಈ ಸ್ಟೀಲ್ ಬ್ಯಾಂಕಿನ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅವರು, ಆ. ೨ ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಐಸಿರಿ ಫೌಂಡೇಶನ್‌ನ ಟ್ರಸ್ಟಿಗಳಾದ ಬಿ.ತಿಪ್ಪೇರುದ್ರಪ್ಪ, ನಂಜೇಶ್ ಬೆಣ್ಣೂರ್, ಸದಾಶಿವಪ್ಪ, ಜಗದೀಶ್ ಬಾಬು, ಬಿ.ಎಂ ಶಶಿಧರ್ ಉಪಸ್ಥಿತರಿದ್ದರು.