ದೇವದುರ್ಗ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಕಾಯಂಗೊಳಿಸಬೇಕು. ಐಸಿಡಿಎಸ್ ಯೋಜನೆ ಬಲವರ್ಧನೆಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ (ಸಿಐಟಿಯು ಸಂಯೋಜಿತ) ಗುರುವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಮೀಣ ಭಾಗದ ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆದರೆ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಐವತ್ತು ವರ್ಷ ಪೂರೈಸಿದ ಐಸಿಡಿಎಸ್ ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಲಾಯಿತು.
ಐಸಿಡಿಎಸ್ ದುರ್ಬಲಗೊಳಿಸುವ ಹುನ್ನಾರ ಕೈಬಿಟ್ಟು ಯೋಜನೆ ಬಲಪಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯಕರ್ತೆಯರಿಗೆ ಗ್ರೇಡ್-3, ಸಹಾಯಕಿಯರಿಗೆ ಗ್ರೇಡ್-4 ಸರ್ಕಾರಿ ನೌಕರಿ ಕಾಯಂಗೊಳಿಸಬೇಕು. ಫಲಾನುಭವಿಗೆ ನೇರ ನಗದು ವರ್ಗಾವಣೆ ತರಬಾರದು ಎಂದು ಒತ್ತಾಯಿಸಲಾಯಿತು.
ಹೊಸಶಿಕ್ಷಣ ನೀತಿ ಕೈಬಿಡಬೇಕು. 6ವರ್ಷದೊಳಗಿನ ಎಲ್ಲ ಮಕ್ಕಳಿಗೆ ಬಾಲ್ಯದ ಆರೈಕೆ, ಶಿಕ್ಷಣದ ಹಕ್ಕು ಖಾತ್ರಿಗೊಳಿಸುವ ಕಾಯ್ದೆ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಿ, ಕೇಂದ್ರಗಳನ್ನು ನೋಡಲ್ ಏಜೆನ್ಸಿಯಾಗಿ ಜಾರಿ ಮಾಡಬೇಕು. ನೌಕರರಿಗೆ ಗ್ರಾಚ್ಯುಟಿ ಪಾವತಿಸಬೇಕೆಂದು ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.