ಮೈಸೂರು: ಮನುಷ್ಯರ ನೆಮ್ಮದಿ ಮತ್ತು ಐಷಾರಾಮಿ ಜೀವನಕ್ಕಾಗಿ ಪ್ರಕೃತಿಯ ಸೌಂದರ್ಯವನ್ನು ನಾಶ ಮಾಡಲಾಗುತ್ತಿದೆ ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗವು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ‘ಜೀವವೈವಿಧ್ಯ ಸಂರಕ್ಷಣೆ: ತಂತ್ರಗಳು ಮತ್ತು ಸವಾಲುಗಳು (ಬಿಸಿಎಸ್‌ಸಿ)’ ಕುರಿತು ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಜೀವಿಗಳ ಜೀವನ ಅನುಕೂಲಕ್ಕಾಗಿ ಪ್ರಕೃತಿಯು ಸಂಪನ್ಮೂಲಗಳನ್ನು ಸಮೃದ್ಧಗೊಳಿಸಿದೆ. ಸಂಪನ್ಮೂಲಗಳ
ವೈವಿಧ್ಯತೆ, ನೈಸರ್ಗಿಕವಾಗಿ ದೊರೆತಿರುವ ಸಮತೋಲಿತ ಪರಿಸರ ವ್ಯವಸ್ಥೆಯನ್ನು ಸುರಕ್ಷಿತ ಮತ್ತು ಸಂತೋಷದ ಜೀವನ ಕಳೆಯಲು ಬಳಸಿಕೊಳ್ಳಬೇಕು. ಆದರೆ, ಮನುಷ್ಯರು ದುರಾಸೆಯಿಂದ ಹೆಚ್ಚಿನ ಸಂಪನ್ಮೂಲಗಳನ್ನು ತಮಗೋಸ್ಕರ ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಪ್ರತಿ ಜೀವಿ ಶಾಂತಿಯುತವಾಗಿ ಬದುಕುವ ಪರಿವೆಯನ್ನು ಮಾನವ ಬೆಳೆಸಿಕೊಳ್ಳಬೇಕು. ಭವಿಷ್ಯದ ಪೀಳಿಗೆಗೆ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಹಳ ಅಗತ್ಯವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಮೈವಿವಿ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಕೆ.ಎನ್.ಅಮೃತೇಶ್ ಮಾತನಾಡಿ, ವೈವಿಧ್ಯಮಯ ಸಸ್ಯಸಂಕುಲ, ಎಲ್ಲ ಜೀವಿಗಳನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಜೀವ ವೈವಿಧ್ಯದ ಅಪಾರ ನಷ್ಟ ತಡೆಯಲು ಜಾಗರೂಕತೆ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಹಿಮಾಲಯ, ಪಶ್ಚಿಮ ಘಟ್ಟಗಳು ಇತ್ಯಾದಿ ಪ್ರದೇಶಗಳಲ್ಲಿ ವೈವಿಧ್ಯಮಯ ಸಸ್ಯ ಕುಟುಂಬದ ಅಸ್ತಿತ್ವವಿದೆ. ಜೀವ ವೈವಿಧ್ಯತೆಯ ತ್ವರಿತ ಸಂರಕ್ಷಣೆಯ ಬಗ್ಗೆ ಪ್ರತಿಜ್ಞೆ ಮಾಡಬೇಕಿದೆ ಎಂದರು.
ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಜೀವ ವೈವಿಧ್ಯತೆಗೆ ಅಪಾಯಕಾರಿಯಾದ ಜನಸಂಖ್ಯಾ ಸ್ಫೋಟ, ಜಾಗತಿಕ ತಾಪಮಾನ ಏರಿಕೆ, ಕೈಗಾರಿಕೀಕರಣದಂತಹ ಅಂಶಗಳ ಬಗ್ಗೆ ವಿವರಿಸಿದರು. ಭೂಮಿ ಮತ್ತು ಜೀವವನ್ನು ಉಳಿಸಲು ಜೀವವೈವಿಧ್ಯತೆಯ ಸಂರಕ್ಷಣೆಯು ಭವಿಷ್ಯದ ಪೀಳಿಗೆಗೆ ದೊರಕಲು ಬೇಕಾಗುವಂತಹ ಸಮರ್ಥ ಮತ್ತು ಸಂಭವನೀಯ ಮಾರ್ಗಗಳನ್ನು ಹುಡುಕಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೊ.ಬಿಳಿಗಿರಿರಂಗ, ಡಾ.ಜಿ.ಎಂ.ಸಿಂಧು ಇದ್ದರು.
ನಂತರ ನಡೆದ ಮೊದಲ ಅಧಿವೇಶನದಲ್ಲಿ ಕೊಯಮತ್ತೂರು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿ ಡಾ.ಎಂ.ಯು. ಷರೀಫ್ ಅವರು ಜೀವವೈವಿಧ್ಯ ಸಂರಕ್ಷಣೆ- ಬಿಎಸ್‌ಐ ದೃಷ್ಟಿಕೋನ ಕುರಿತು ಮಾತನಾಡಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಅತಿಥಿ ಅಧ್ಯಾಪಕ ಡಾ.ಆರ್.ರಾಘವೇಂದ್ರರಾವ್ ಅವರು ‘21 ನೇ ಶತಮಾನದ ಮಾನವ ಕಲ್ಯಾಣಕ್ಕಾಗಿ ಜೈವಿಕ ವೈವಿಧ್ಯತೆ ಮತ್ತು ಜೈವಿಕ ನಿರೀಕ್ಷೆಗಳು- ಕಾಳಜಿಗಳು, ಕಾರ್ಯತಂತ್ರಗಳು ಮತ್ತು ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, 65 ಅಧ್ಯಾಪಕರು ಮತ್ತು 20 ಸಂಶೋಧಕರು ಪಾಲ್ಗೊಂಡಿದ್ದರು.