ಮೈಸೂರು:ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಮಠ-ಪೀಠಗಳ ಕರ್ತವ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಭಂಡಾರಕೇರಿ ಮಠ, ಮಾಧ್ವರಾದ್ಧಾಂತ ಸಂವರ್ಧಕ ಸಭಾ ಸಂಯುಕ್ತವಾಗಿ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀವೇದವ್ಯಾಸ ಜಯಂತಿ, ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವದಲ್ಲಿ ಐವರು ವಿದ್ವಾಂಸರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ವಿದ್ವತ್ ಕ್ಷೇತ್ರಕ್ಕೆ ವಿದ್ಯಾಮಾನ್ಯತೀರ್ಥರ ಕೊಡುಗೆ ಅನನ್ಯವಾಗಿದೆ. ಅವರನ್ನು ಸ್ಮರಿಸಿಕೊಳ್ಳುವುದು ಒಂದು ಸುಯೋಗ. ಅವರು ಹಾಕಿಕೊಟ್ಟ ದಿವ್ಯ ಮಾರ್ಗದಲ್ಲಿ ಭಂಡಾರಕೇರಿ ಸಂಸ್ಥಾನ ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವುದು ಮಾದರಿ ಎಂದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪಿ.ಕೇಶವಬಾಯರಿ ಅವರಿಗೆ ಶ್ರೀರಾಜ ವಿದ್ಯಾವಂದ್ಯ ಪ್ರಶಸ್ತಿ, ಉಡುಪಿಯ ಮೂಡುಸಗ್ರಿ ಪರವಿದ್ಯಾ ಪ್ರತಿಷ್ಠಾನದ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ವೇದಪೀಠ ಪ್ರಶಸ್ತಿ, ಬೆಂಗಳೂರಿನ ಯುವ ವಿದ್ವಾಂಸ ಸತ್ಯಪ್ರಮೋದ ಕಟ್ಟಿ ಅವರಿಗೆ ಶ್ರೀಸತ್ಯತೀರ್ಥ ಅನುಗ್ರಹ ಪ್ರಶಸ್ತಿ, ಬೆಂಗಳೂರಿನ ವಿದ್ಯಾಮಾನ್ಯನಗರದ ಎನ್.ಗಣಪತಿಭಟ್ಟರಿಗೆ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿ, ಟಿಟಿಡಿ ಬೋರ್ಡ್ ಮಾಜಿ ಸದಸ್ಯ ಡಿ.ಪಿ.ಅನಂತ ಅವರಿಗೆ ಶ್ರೀಶ ರಾಜದರ್ಶನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೋಸಲೆ ವ್ಯಾಸರಾಜಮಠದ ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣಾಚಾರ್ಯ ಅವರು ಭಗವಾನ್ ವೇದವ್ಯಾಸರ ಬಗ್ಗೆ ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯೇಶ ತೀರ್ಥ ವಿರಚಿತ ಗೀತೆಗಳ ಸಂಗ್ರಹ ‘ಕೃತಿಮಂಜರಿ’ ಬಿಡುಗಡೆ ಮಾಡಲಾಯಿತು. ಮಾತೃಭೂಮಿ ಪದ್ಯಮಾಲಾದ ದೃಶ್ಯ-ಶ್ರಾವ್ಯ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೂ ಮುನ್ನ ಕೃಷ್ಣಮೂರ್ತಿಪುರಂನ ಸೋಸಲೆ ವ್ಯಾಸರಾಜರ ವಿದ್ಯಾಪೀಠದಿಂದ ಶಾರದಾವಿಲಾಸ ಕಾಲೇಜಿನ ವರೆಗೆ ಶ್ರೀ ವೇದವ್ಯಾಸರ ಭಾವಚಿತ್ರ ಸಹಿತ ಶೋಭಾಯಾತ್ರೆ ನಡೆಯಿತು. ವಿವಿಧ ಭಜನಾ ಮಂಡಳಿ ಸದಸ್ಯರು, ವಿದ್ವಾಂಸರು, ಮಾಧ್ವ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.