ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಒಂದು ವೇಳೆ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳದಿದ್ದರೆ, ಬಾಂಗ್ಲಾದೇಶ ಪ್ರಧಾನ ಮಂತ್ರಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜ ವಿರುದ್ಧ ಮಂಗಳವಾರ ನಗರ ಯುವ ಮೋರ್ಚಾ ಘಟಕದಿಂದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ನಿಂದಿಸುವ ಮೂಲಕ ಕರ್ನಾಟಕದ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಕಾಂಗ್ರೆಸ್ಸಿನ ನಾಯಕರು ಹತಾಶ ಮನಸ್ಥಿತಿಯಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಹೇಳಿಕೆಯಿಂದ ತಿಳಿಯುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂದರೆ ಏನು ಇವರ ಉದ್ದೇಶ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ರಾಜ್ಯಾದ್ಯಂತ ಯುವ ಮೋರ್ಚಾ ಘಟಕದಿಂದ ಹೋರಾಟ ಮಾಡಲಾಗುವುದು ಎಂದರು. ನಗರಾಡಳಿತ ಪ್ರಕೋಷ್ಠ ಜಿಲ್ಲಾ ಸಂಚಾಲಕ ಕೆ.ಎಚ್.ವೆಂಕಟರಾಜು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಜೆ.ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಎನ್.ಕೆ.ರಮೇಶ್, ತಿರುಮಲ ಮಂಜು, ಯುವ ಮೋರ್ಚಾದ ಅನಿಲ್, ಅಜೇಯ, ಫಣೀಶ್, ವಿರಾಟ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕವಿತಾ, ಮುಖಂಡರಾದ ಶ್ರೀನಿವಾಸ, ಮಧು ಬೇಗಲಿ, ನರೇಂದ್ರ ಇದ್ದರು.