ಹಾಸನ: ಅರಸೀಕೆರೆ ನಗರದಲ್ಲಿ ಇತ್ತೀಚೆಗೆ ಐಫೋನ್ ಆಸೆಗೆ ಡೆಲಿವರಿ ಹುಡುಗ ಹೇಮಂತ ನಾಯಕ (23) ಎಂಬಾತನನ್ನು ಕೊಲೆ ಮಾಡಿದ್ದ ಕೊಲೆಗಾರನನ್ನು ಬಂಧಿಸುವಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಸೀಕೆರೆ ನಗರದ ಲಕ್ಷ್ಮೀಪುರಂ ಬಡಾವಣೆ ನಿವಾಸಿ ಹೇಮಂತ ದತ್ತ (20) ಬಂಧಿತ ಆರೋಪಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣದ ವಿವರ:
ಅರಸೀಕೆರೆ ತಾಲೂಕು ಕಸಬಾ ಹೋಬಳಿ ಹಳೆಕಲ್ಲನಾಯಕನಹಳ್ಳಿ ಗ್ರಾಮದ ಹೇಮಂತ ನಾಯಕ ಎಂಬ ಯುವಕ ಇ-ಕಾರ್ಟ್ ಎಕ್ಸ್‌ಪ್ರೆಸ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಫೆ.7 ರಿಂದ ಕಾಣೆ ಆಗಿದ್ದ. ಈ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆ.11 ರಂದು ಅರಸೀಕೆರೆ ತಾಲೂಕು ಅಂಚೆಕೊಪ್ಪಲು ರೈಲ್ವೆ ಸೇತುವೆ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನೊಬ್ಬ ಶವ ಪತ್ತೆ ಆಗಿತ್ತು. ಆ ಶವ ಕಾಣೆಯಾಗಿದ್ದ ಹೇಮಂತ ನಾಯಕನದು ಎಂದು ಆತನ ಅಣ್ಣ ಮಂಜನಾಯಕ ಗುರುತು ಹಿಡಿದ ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.
ಹೇಮಂತನಾಯಕ ಕಾಣೆಯಾದ ದಿನ ಕೊನೆಯದಾಗಿ ಯಾವ ಗ್ರಾಹಕನಿಗೆ ಡೆಲಿವರಿ ಮಾಡಲು ಹೋಗಿದ್ದ ಎಂದು ಪರಿಶೀಲನೆ ನಡೆಸಿದಾಗ, ಆತ ಕೊನೆಯದಾಗಿ ಐಫೋನ್ ಡೆಲಿವರಿ ಮಾಡಿದ್ದ ಅರಸೀಕೆರೆ ನಗರದ ಲಕ್ಷ್ಮೀಪುರಂ ಬಡಾವಣೆ ನಿವಾಸಿ ಹೇಮಂತ ದತ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಫ್ಲೆಕ್ಸ್ ತಯಾರಿಕೆ ಕೆಲಸ ಮಾಡಿಕೊಂಡಿದ್ದ ಕೇವಲ 20 ವರ್ಷ ವಯಸ್ಸಿನ ಹೇಮಂತ ದತ್ತನ ಬಳಿ ಹಣ ಇಲ್ಲದಿದ್ದರೂ ಐಫೋನ್ ಖರೀದಿಸುವ ಆಸೆ ಹುಟ್ಟಿಕೊಂಡಿದೆ. ಆನ್‌ಲೈನ್‌ನಲ್ಲಿ ಐಫೋನ್ ಬುಕ್ ಮಾಡಿದ್ದ ಆತ, ಅದನ್ನು ಡೆಲಿವರಿ ಮಾಡಲು ಬಂದಿದ್ದ ಹೇಮಂತ ನಾಯಕನಿಂದ ಐಫೋನ್ ಪಡೆದುಕೊಂಡು, ಹಣ ತರುತ್ತೇನೆ ಎಂಬುದಾಗಿ ಹೇಳಿ ಒಳಹೋದವನು ಚಾಕು ತೆಗೆದುಕೊಂಡು ಬಂದು ಹೇಮಂತನಾಯಕನನ್ನು ಚುಚ್ಚಿ ಕೊಲೆ ಮಾಡಿದ್ದಾನೆ.
ಮೂರು ದಿನ ಮನೆಯಲ್ಲೇ ಶವ ಇಟ್ಟುಕೊಂಡಿದ್ದ:
ಹೇಮಂತನಾಯಕನನ್ನು ಕೊಲೆ ಮಾಡಿದ ನಂತರ ಆತನ ಶವವನ್ನು ಹೇಮಂತ ದತ್ತ ಮೂರು ದಿನಗಳ ತನ್ನ ಮನೆಯ ಬಚ್ಚಲುಮನೆಯಲ್ಲೇ ಇಟ್ಟುಕೊಂಡಿದ್ದ. ಶವ ಕೊಳೆತು ವಾಸನೆ ಬರಲಾರಂಭಿಸಿದ ನಂತರ ಫೆ.11 ರಂದು ಬೆಳಗಿನಜಾವ ಅಂಚೆಕೊಪ್ಪಲು ರೈಲ್ವೆ ಸೇತುವೆ ಬಳಿ ತೆಗೆದುಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಗುರುತು ಸಿಗದಂತೆ ಸುಟ್ಟುಹಾಕಿ ಬಂದಿದ್ದ.
ಅರಸೀಕೆರೆ ಡಿವೈಎಸ್‌ಪಿ ಜಿ. ಲೋಕೇಶ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಅರಸೀಕೆರೆ ನಗರಠಾಣೆ ಇನ್‌ಸ್ಪೆಕ್ಟರ್ ಗಂಗಾಧರ್ ನೇತೃತ್ವದ ತಂಡ ಕೊಲೆಗಾರನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ. ಕೊಲೆ ಪ್ರಕರಣ ಭೇದಿಸಿದ ಪೊಲೀಸರ ತಂಡಕ್ಕೆ 15 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.