ಚಿತ್ರದುರ್ಗ: ಬೆಂಗಳೂರಿನಲ್ಲಿ ಕಾಲ್ತುಳಿತದಿಂದ 11 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಸೇವೆಯಿಂದ ಅಮಾನತು ಮಾಡಿದ ರಾಜ್ಯಸರ್ಕಾರದ ಕ್ರಮ ಖಂಡಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಸಂಭ್ರಮಾಚರಣೆಗೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಸೇರುವ ನಿರೀಕ್ಷೆ ಇತ್ತು. ಆದ್ದರಿಂದ ಸೂಕ್ತ ಸಿದ್ಧತೆಗಳೊಂದಿಗೆ ಕಾರ್ಯಕ್ರಮ ಏರ್ಪಡಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ 24 ಗಂಟೆ ಅವಧಿಯೊಳಗೆ ಕಾರ್ಯಕ್ರಮ ಏರ್ಪಡಿಸಿದ್ದು ದುರಂತಕ್ಕೆ ಕಾರಣವಾಗಿದೆ ಎಂದು ವೇದಿಕೆ ಕಾರ್ಯಕರ್ತರು ಆರೋಪಿಸಿದರು.
ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೆ ತನ್ನ ವೈಫಲ್ಯ, ಲೋಪ-ದೋಷಗಳನ್ನು ಮರೆ ಮಾಚಲು ರಾಜ್ಯ ಸರ್ಕಾರ ದಕ್ಷ ಅಧಿಕಾರಿ ಅಮಾನತು ಮಾಡಿರುವುದು ಸರಿಯಲ್ಲ. ಹಿಂದುಳಿದ ವರ್ಗದ ಅಧಿಕಾರಿಯನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಅವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದು ಅವರನ್ನು ಬೆಂಗಳೂ ರು ನಗರ ಪೊಲೀಸ್ ಆಯುಕ್ತರ ಹುದ್ದೆಯಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ದರು.
ವೇದಿಕೆ ಅಧ್ಯಕ್ಷ ರಾಜಣ್ಣ ಲಕ್ಷ್ಮೀಸಾಗರ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಅಶೋಕ್‌ಬೆಳಗಟ್ಟ, ಓಬಳೇಶ್, ಬಸವರಾಜು, ಮಂಜುನಾಥ್, ಮಲ್ಲಾಪುರ ಸತ್ಯಣ್ಣ, ಬೋರಣ್ಣ, ತಿಪ್ಪೇಸ್ವಾಮಿ, ಪ್ರಶಾಂತ್ ಕುಮಾರ್, ಮಂಜಣ್ಣ, ವಿನಯ್, ಬಸವರಾಜಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.