ಜಿಲ್ಲೆ

ಐಪಿಎಲ್ ಮಾದರಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್

ವಿರಾಜಪೇಟೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೂರ್ಗ್ ಕ್ರಿಕೆಟ್ ಫೌಂಡೇಷನ್ ಕೊಡಗಿನಲ್ಲಿರುವ ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಇದಕ್ಕೆ ಪೂಕರವಾಗಿ 2024ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮಾದರಿಯಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ತೀರ್ಮಾನಿಸಿದೆ. ಪಂದ್ಯಾವಳಿಯನ್ನು ಮಡಿಕೇರಿ ಅಥವಾ ವಿರಾಜಪೇಟೆಯಲ್ಲಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಕೂರ್ಗ್ ಕ್ರಿಕೆಟ್ ಫೌಂಡೇಷನ್ ಸಂಯೋಜಕರು ‘ವಿಜಯವಾಣಿ’ಗೆ ತಿಳಿಸಿದರು.

ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ. ಈಗಾಗಲೇ 200ಕ್ಕೂ ಹೆಚ್ಚು ಕ್ರಿಕೆಟ್ ಆಟಗಾರರು ಕೂರ್ಗ್ ಕ್ರಿಕೆಟ್ ಫೌಂಡೇಷನ್ ಸದಸ್ಯರನ್ನು ಸಂಪರ್ಕಿಸಿದ್ದು, ಫ್ರಾಂಚೈಸಿಗಳು ಕೂಡ ಆಸಕ್ತಿ ತೋರಿಸಿದ್ದಾರೆ. ಒಂದು ತಂಡಕ್ಕೆ 15 ಆಟಗಾರರನ್ನು ನೀಡಲಾಗುತ್ತದೆ. ಬಿಡ್ಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. 2024 ಜನವರಿ ತಿಂಗಳಿನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಆ ಮೂಲಕ ತಂಡದ ಮಾಲೀಕರು ಪಂದ್ಯಾವಳಿಗೆ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಇದು ಕೆಂಪು ಬಣ್ಣದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಮೊದಲಿಗೆ ಕೊಡವ ಕುಟುಂಬದ ಮಕ್ಕಳಿಗೆ ಆಡಲು ಆದ್ಯತೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಎಲ್ಲ ಜನಾಂಗದ ಆಸಕ್ತ ಕ್ರೀಡಾಪಟುಗಳನ್ನು ಸೇರಿಸಿಕೊಂಡು ಪಂದ್ಯಾವಳಿಯನ್ನು ದೊಡ್ಡಮಟ್ಟದಲ್ಲಿ ನಡೆಸಲಾಗುವುದು. ಈ ಬಾರಿ ಕೊಡವ ಫ್ರಾಂಚೈಸಿಗಳಿಗೆ ಪ್ರಾಧಾನ್ಯತೆ ನೀಡಿ ನಂತರದ ವರ್ಷಗಳಲ್ಲಿ ಇತರ ಜನಾಂಗದ ಫ್ರಾಂಚೈಸಿಗಳಿಗೂ ಅವಕಾಶ ನೀಡಲಾಗುವುದು ಎಂದು ಪಂದ್ಯಾವಳಿ ಸಂಯೋಜಕ ಚಂಡೀರ ರಚನ್ ತಿಳಿಸಿದರು.

ಈ ಕ್ರಿಕೆಟ್ ಪಂದ್ಯಾವಳಿ ಹಬ್ಬದ ಮಾದರಿಯಲ್ಲಿ 15 ರಿಂದ 20 ದಿನಗಳ ಕಾಲ ನಡೆಯಲಿದೆ. ಜಗತ್ತಿನ ಎಲ್ಲ ಭಾಗದಲ್ಲಿರುವ ಕ್ರೀಡಾಭಿಮಾನಿಗಳು ಪಂದ್ಯಾವಳಿ ನೋಡಲು ಅನುಕೂಲವಾಗುವಂತೆ ಸೆಮಿಪೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡುವ ವ್ಯವಸ್ಥೆಯನ್ನು ನಮ್ಮ ಫೌಂಡೇಷನ್ ಮಾಡಿಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಯುವಜನರನ್ನು ತಲುಪಲು ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಪಂದ್ಯಾಟಕ್ಕೆ ವೃತ್ತಿಪರ ಅಂಪೈರ್‌ಗಳನ್ನು ಕರೆಯಿಸುತ್ತೇವೆ. ಸ್ಥಳೀಯ ಗಣ್ಯರ ಜತೆಗೆ ಸೆಲೆಬ್ರೆಟಿಗಳನ್ನು ಕರೆ ತರುವ ನಿಟ್ಟಿನಲ್ಲಿಯೋಜನೆಗಳನ್ನು ರೂಪಿಸುತ್ತಿದ್ದೇವೆ. ಈ ಪಂದ್ಯಾಟದ ಮಾರ್ಗದರ್ಶಕರಾಗಿ ಕ್ರೀಡಾಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ಚೇರಂಡ ಕಿಶನ್ ಮಾದಪ್ಪ ಇರಲಿದ್ದಾರೆ. ಇದರಿಂದ ಪಂದ್ಯಾಟ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಲಿದೆ ಎನ್ನುವುದು ಪಂದ್ಯಾವಳಿ ಸಯೋಜಕರ ಅಭಿಮತ.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ. ಹಾಗೂ ರನ್ನರ್ ಅಪ್ ಪಡೆಯುವ ತಂಡಕ್ಕೆ 50 ಸಾವಿರ ರೂ. ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲು ಉದ್ದೇಶಿಸಲಾಗಿದೆ. ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಕ್ರೀಡಾಪಟುವಿಗೆ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೂರ್ಗ್ ಕ್ರಿಕೆಟ್ ಫೌಂಡೇಷನ್ ಅಧ್ಯಕ್ಷ ಪೊರುಕೊಂಡ ಸುನೀಲ್ -9686107297, ಚಂಡಿರ ರಚನ್ ಚಿಣ್ಣಪ್ಪ 9611081067 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಯೋಜಕರು ‘ವಿಜಯವಾಣಿ’ಗೆ ಮಾಹಿತಿ ನೀಡಿದರು.