ರೇವಣಸಿದ್ದಪ್ಪ ಪಾಟೀಲ್ ಬೀದರ್
ಬೇಸಿಗೆ ಪ್ರಖರ ಬಿಸಿಲು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವಂತೆ ಟಿ20- ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ದಂಧೆಯೂ ಗಡಿ ಜಿಲ್ಲೆಯಲ್ಲಿ ಜೋರಾಗಿದೆ. ಮಹಾಮಾರಿ ಕರೊನಾ ಕಾರಣಕ್ಕೆ ಎರಡು ವರ್ಷ ನೆಲಕಚ್ಚಿದ್ದ ಬೆಟ್ಟಿಂಗ್ ಇದೀಗ ಮತ್ತೆ ಕಳೆಗಟ್ಟಿದೆ.
ಮಾ.26ರಿಂದ ಪ್ರಾರಂಭವಾಗಿರುವ 15ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಮೇ 29ರಂದು ಮುಕ್ತಾಯವಾಗಲಿವೆ. ಈ ಬಾರಿ ಹೆಚ್ಚುವರಿಯಾಗಿ ಎರಡು ತಂಡ ಸೇರ್ಪಡೆಯೊಂದಿಗೆ 10 ತಂಡಗಳಿದ್ದು, ಪ್ರತಿ ಪಂದ್ಯದ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಾರ್ವಜನಿಕ ಸ್ಥಳ, ಅಂಗಡಿ-ಮುಂಗಟ್ಟು, ಫೈನಾನ್ಸ್ ಸೇರಿ ನಾನಾ ಕಡೆ ಅಕ್ರಮ ದಂಧೆ ಜೋರಾಗಿ ನಡೆಯುತ್ತಿದೆ. ಈ ದಂಧೆಗೆ ಕಡಿವಾಣ ಹಾಕಲು ಖಾಕಿಪಡೆ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದರೂ ಎಲೆಮರೆ ಕಾಯಿಯಂತೆ ಜೋರ್ದಾರ್ ನಡೆದಿದೆ.
ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ಇದೀಗ ಹಳ್ಳಿಗಳಿಗೂ ವ್ಯಾಪಿಸಿದೆ. ಗ್ರಾಮದ ಅಂಗಡಿ, ಅಗಸಿ, ಅರಳೆ ಕಟ್ಟೆಗಳಲ್ಲಿ ಗುಂಪು-ಗುಂಪಾಗಿ ಸೇರುವ ಯುವಕರು ಟಿ20 ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ. ಕೆಲವರು ಕೆಲಸ ಬಿಟ್ಟು ಈ ದಂಧೆಯಲ್ಲಿ ತೊಡಗಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ. ಪ್ರತಿಯೊಬ್ಬರಲ್ಲೂ ಈಗ ಆಂಡ್ರಾಯ್ಡ್ ಮೊಬೈಲ್ಗಳಿದ್ದು, ಮೊಬೈಲ್ನಲ್ಲೇ ಪಂದ್ಯ ವೀಕ್ಷಣೆ ಜತೆಗೆ ಬೆಟ್ಟಿಂಗ್ ಆಡುತ್ತಿರುವುದು ಆತಂಕ ಮೂಡಿಸಿದೆ.
ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಬುಕ್ಕಿಗಳಿಂದ ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರು ಹಿಡಿದಿದೆ. ಹೈದರಾಬಾದ್, ಲಾತೂರ, ಪುಣೆ ಹಾಗೂ ಮುಂಬೈನಿಂದ ನೇರ ಸಂಪರ್ಕ ಹೊಂದಲಾಗಿದೆ. ಬುಕ್ಕಿಗಳ ಕೆಲ ಏಜೆಂಟರು ಜಿಲ್ಲೆಯಲ್ಲಿದ್ದು, ಅವರ ಮೂಲಕ ಅಕ್ರಮ ವಹಿವಾಟು ಬಿಂದಾಸ್ ನಡೆಯುತ್ತಿದೆ.
ಜೂಜಾಟ, ಮಟ್ಕಾದಂಥ ಅಕ್ರಮ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ನಿತ್ಯ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ ಐಪಿಎಲ್ ಪಂದ್ಯಗಳ ಮೇಲಿನ ಅಕ್ರಮಕ್ಕೆ ಕಡಿವಾಣ ಇಲ್ಲದಂತಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಬೆಟ್ಟಿಂಗ್ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರು ಎಷ್ಟು ನಿಗಾ ಇರಿಸಿದ್ದರೂ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕುವುದು ಸವಾಲಿನ ಕೆಲಸವಾಗಿದೆ.
ಹೇಗೆ ಲೆಕ್ಕಾಚಾರ?: ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ಶುರುವಾಗುವ ಬೆಟ್ಟಿಂಗ್ ಲಕ್ಷ ರೂಪಾಯಿಗೂ ಅಧಿಕ ಲೆಕ್ಕಾಚಾರಗಳಲ್ಲಿ ನಡೆಯುತ್ತಿವೆ. ತಂಡದಿಂದ ತಂಡ, ಓವರ್ ಟು ಓವರ್ ರನ್ ಗಳಿಕೆ, ಅವರವರ ನೆಚ್ಚಿನ ಕ್ರಿಡಾಪಟು ಗಳಿಸುವ ರನ್ಗಳ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಬಹುತೇಕರು ಪಂದ್ಯಗಳ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ನಾಲ್ಕು ಪ್ರಕರಣ ದಾಖಲು: ಐಪಿಎಲ್ ಬೆಟ್ಟಿಂಗ್ ಸಂಬಂಧ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ. ಜನವರಿಯಲ್ಲಿ ಭಾಲ್ಕಿ ನಗರ ಠಾಣೆ, ಮಾ.28ರಂದು ಬಸವಕಲ್ಯಾಣ, ಮಾ.31ಕ್ಕೆ ಹುಮನಾಬಾದ್ ಹಾಗೂ ಏ.4ರಂದು ಬಸವಕಲ್ಯಾಣ ನಗರ ಠಾಣೆಯಲ್ಲಿ ಬೆಟ್ಟಿಂಗ್ ಸಂಬಂಧ ಕೇಸ್ ದಾಖಲಾಗಿದೆ. ಈ ನಾಲ್ಕು ಪ್ರಕರಣ ಸಂಬಂಧ 18 ಜನರನ್ನು ಬಂಧಿಸಿದ್ದು, 1.31 ಲಕ್ಷ ರೂ. ನಗದು ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ನಡೆದಿರುವ ಐಪಿಎಲ್ ಬೆಟ್ಟಿಂಗ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜನವರಿಯಿಂದ ಈವರೆಗೆ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಅಕ್ರಮ ದಂಧೆ ಕುರಿತು ಸಾರ್ವಜನಿಕರು ಮಾಹಿತಿ ನೀಡಬೇಕು. ಬೆಟ್ಟಿಂಗ್ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
| ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ