ಜಿಲ್ಲೆ

ಐದೇ ದಿನಗಳಲ್ಲಿ 18 ಕೋಟಿ ರೂ.

ಗದಗ: ಲಾಕ್​ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ 5 ದಿನಗಳಲ್ಲಿ ಗದಗ ಜಿಲ್ಲೆಯೊಂದರಲ್ಲೇ 18 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ. ದಿನದಿಂದ ದಿನಕ್ಕೆ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಅಂಗಡಿಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೂ ಜನರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.

ಗದಗ ಜಿಲ್ಲೆಯಲ್ಲಿ ಮೇ 4ರಿಂದ ಮೇ 7ರವರೆಗೆ ಒಟ್ಟು 16 ಕೋಟಿ ರೂ. ಮದ್ಯ ಮಾರಾಟವಾಗಿದೆ. ಇದರಲ್ಲಿ ಮೇ 4ರಂದು ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 22,665 ಲೀಟರ್, ಬಿಯರ್ 5828 ಲೀಟರ್, ಮೇ 5ರಂದು ಐಎಂಎಲ್ 6398 ಲೀಟರ್, ಬಿಯರ್ 1027 ಲೀಟರ್, ಮೇ 6ರಂದು ಐಎಂಎಲ್ 7886 ಲೀಟರ್, ಬಿಯರ್ 1135 ಲೀಟರ್, ಮೇ 7ರಂದು ಐಎಂಲ್ 5066 ಲೀಟರ್, ಬಿಯರ್ 1262 ಲೀಟರ್ ಸೇರಿ ಒಟ್ಟು ನಾಲ್ಕು ದಿನಗಳಲ್ಲಿ ಐಎಂಎಲ್ 42,015 ಲೀಟರ್ ಹಾಗೂ ಬಿಯರ್ 9252 ಲೀಟರ್ ಮಾರಾಟವಾಗಿದೆ. ಶುಕ್ರವಾರ 2 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಂದಾಜು 18 ಕೋಟಿ ರೂ. ಮದ್ಯ ಮಾರಾಟವಾದಂತಾಗಿದೆ.

ಮೇ 4ರಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರಿಂದ ಮದ್ಯದಂಗಡಿಗಳ ಮಾಲೀಕರು ಗ್ರಾಹಕರ ನಡುವೆ ಕಾಯ್ದುಕೊಳ್ಳಲು ತಮ್ಮ ಅಂಗಡಿಗಳ ಮುಂದೆ ಕಟ್ಟಿಗೆ ಕಂಬಗಳನ್ನು ಹಾಕಿದ್ದಾರೆ. ಕೈ ಶುಚಿಗೊಳಿಸಲು ಸ್ಯಾನಿಟೈಸರ್ ಇಟ್ಟಿದ್ದಾರೆ. ಪ್ರತಿಯೊಬ್ಬರಿಗೆ ಸರ್ಕಾರ ಗರಿಷ್ಠ 2.3 ಲೀಟರ್ ಐಎಂಎಲ್ ಹಾಗೂ 18 ಲೀಟರ್ ಬಿಯರ್ ಖರೀದಿಗೆ ಅವಕಾಶ ನೀಡಲಾಗಿದೆ.

ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಜನರು ಬೆಳಗ್ಗೆ 8 ಗಂಟೆಗೇ ಬಂದು ಮದ್ಯದಂಗಡಿಯ ಮುಂದೆ ನಿಲ್ಲುವುದು ಸಾಮಾನ್ಯವಾಗಿದೆ. ಮಧ್ಯಾಹ್ನ ಉರಿ ಬಿಸಿಲು ಲೆಕ್ಕಿಸದೆ ಜನರು ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 141 ಮದ್ಯದ ಅಂಗಡಿಗಳ ಪೈಕಿ 70 ಮಾತ್ರ ಆರಂಭವಾಗಿವೆ. ಇದರಲ್ಲಿ 15 ಎಂಎಸ್​ಐಎಲ್ ಶಾಪ್, 55 ವೈನ್ ಶಾಪ್​ಗಳಿವೆ. ಮತ್ತೆ ಲಾಕ್​ಡೌನ್ ಆಗಬಹುದು ಎಂಬ ಭಯದಿಂದ ಮದ್ಯ ಪ್ರಿಯರು ಮದ್ಯವನ್ನು ಸ್ಟಾಕ್ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಮದ್ಯದ ವ್ಯಾಪಾರ ಜೋರಾಗಿ ನಡೆದಿದೆ.

ಮೇ 5 ರಿಂದ 7ರವರೆಗೆ ಮೂರು ದಿನ 8.69 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಶುಕ್ರವಾರ ಕೂಡ 2.18 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿರುವ ಸಾಧ್ಯತೆ ಇದೆ. ಮೇ 4ರಂದು ಮಾರಾಟವಾಗಿರುವ ಮದ್ಯ ಹಳೆಯ ಸ್ಟಾಕ್ ಆಗಿದ್ದು, ಅದು ನಮ್ಮ ಲೆಕ್ಕಕ್ಕೆ ಬರುವುದಿಲ್ಲ. ಇಲಾಖೆಯ ಡಿಪೋದಿಂದ ಮೇ 5ರಿಂದ ಮೇ 7ರವರೆಗೆ ಮದ್ಯದಂಗಡಿಗಳಿಗೆ ಕಳಿಸುವ ಅಂಕಿಅಂಶವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೀಗಾಗಿ, ಮೇ 5ರಿಂದ ಮೇ 8ರವರೆಗೆ ಅಂದಾಜು 10.5 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ.ಮೋತಿಲಾಲ, ಉಪ ಆಯುಕ್ತ, ಅಬಕಾರಿ ಇಲಾಖೆ ಗದಗ