ಕೊಪ್ಪಳ: ನಮ್ಮ ಸರ್ಕಾರ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಇಂದು ನಾಲ್ಕನೇ ಗ್ಯಾರಂಟಿ ಜಾರಿಗೊಳಿಸಿದೆ. ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಯೋಜನೆ ಎಂಬ ವಿಪಕ್ಷಗಳ ಟೀಕೆ ನಂಬಬೇಡಿ. ಐದು ವರ್ಷವೂ ಐದು ಗ್ಯಾರಂಟಿ ಯೋಜನೆಗಳು ನಿಮಗೆ ಲಭಿಸಲಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಸದ್ಯ ನಾಲ್ಕನೇ ಗ್ಯಾರಂಟಿಯಾದ ಮನೆಯೊಡತಿ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಹಾಕುವ ಯೋಜನೆಗೆ ಚಾಲನೆ ನೀಡಿದ್ದೇವೆ. ಕೇವಲ 100 ದಿನದಲ್ಲಿ ಕೊಟ್ಟ ಮಾತು ಈಡೇರಿಸಿದ್ದೇವೆ. ಶೀಘ್ರವೇ ಇನ್ನೊಂದು ಗ್ಯಾರಂಟಿ ಜಾರಿ ಮಾಡುತ್ತೇವೆ. ಗೃಹ ಲಕ್ಷ್ಮೀ ಯೋಜನೆಗೆ ಜಿಲ್ಲೆಯಲ್ಲಿ 2,78,881 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಿಗೆ 55.04 ಕೋಟಿ ರೂ. ಹಣ ಜಮಾ ಆಗಲಿದೆ. ವರ್ಷಕ್ಕೆ 660 ಕೋಟಿ ರೂ. ಸಿಗಲಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ಇನ್ನೊಬ್ಬರ ಬಳಿ ಮನೆ ಖರ್ಚಿಗೆ ಕೈ ಚಾಚುವ ಅಗತ್ಯವಿಲ್ಲ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಕೇವಲ 100 ದಿನದಲ್ಲಿ ಜನರ ಕಲ್ಯಾಣ ಯೋಜನೆ ಜಾರಿ ಮಾಡಿದ್ದೇವೆ. ಜಗತ್ತಿನಲ್ಲೇ ಇಷ್ಟು ಅತ್ಯುತ್ತಮ ಯೋಜನೆ ನೀಡಿದ ಸರ್ಕಾರ ಮತ್ತೊಂದಿಲ್ಲ. ಕೇಂದ್ರ ಸರ್ಕಾರ 9 ವರ್ಷದಲ್ಲಿ ಜನತೆಗೆ ಏನನ್ನೂ ನೀಡಲಿಲ್ಲ. ಪ್ರಧಾನಿ ಮೋದಿ ಉಚಿತ ಯೋಜನೆಯಿಂದ ಅರ್ಥ ವ್ಯವಸ್ಥೆ ಹಾಳಾಗಲಿದೆ ಎನ್ನತ್ತಾರೆ. ದೇಶದಲ್ಲಿ ಸಾಲ ಮಾಡಿ ಓಡಿ ಹೋದವರು ಅವರ ಗುಜರಾತಿಗರೇ. ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ಜಿಲ್ಲೆ ಹಾಗೂ ಕೊಪ್ಪಳ ಕ್ಷೇತ್ರದಲ್ಲಿ ನೀರಾವರಿ, ರಸ್ತೆ, ಅಂಗನವಾಡಿ ಸೇರಿ ಇತರ ಅಭಿವೃದ್ಧಿ ಮಾಡಲಾಗುವುದೆಂದರು.
ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ಕಾವ್ಯಾರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಗಂಗಪ್ಪ ಇತರರಿದ್ದರು.