ಚಿತ್ರದುರ್ಗ: ಮಾನವ ಕಳ್ಳ ಸಾಗಣೆ ಅತೀ ದೊಡ್ಡ ಜಾಲ ಹೊಂದಿದೆ. ರಾಜ್ಯದ 5 ವರ್ಷದ ಅಂಕಿ-ಅಂಶ ಗಮನಿಸಿದರೆ 27 ಸಾವಿರ ಮಕ್ಕಳು ಕಾಣೆಯಾದ ಕುರಿತು ಪ್ರಕರಣ ದಾಖಲಾಗಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘದಿಂದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಾನವ ಕಳ್ಳ ಸಾಗಣಿಕೆ ತಡೆ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
ಮಾನವ ಕಳ್ಳ ಸಾಗಾಣೆಯಲ್ಲಿ ದೇಶದಲ್ಲೇ ಕರ್ನಾಟಕ 3ನೇ ಸ್ಥಾನದಲ್ಲಿದೆ. ಇದು ನಮ್ಮೆಲ್ಲರನ್ನು ಆಘಾತಕ್ಕೆ ಈಡು ಮಾಡಿದೆ. ಬಿಹಾರ, ರಾಜಸ್ಥಾನ ಸೇರಿ ಯಾವುದೋ ರಾಜ್ಯದಲ್ಲಿದ್ದುಕೊಂಡು ರಾಜ್ಯದ ಕೆಲ ಕಾರ್ಖಾನೆಗಳಲ್ಲಿ ನಮ್ಮ ನಾಡಿನ ಮಕ್ಕಳು ಜೀತದಾಳಾಗಿದ್ದಾರೆ ಎಂದರೇ ಜಾಲ ವ್ಯಾಪಕವಾಗಿದೆ ಎಂದೇ ಆರ್ಥ ಎಂದು ದೂರಿದರು.
ತಿಪಟೂರಿನ ಕೊಬ್ಬರಿ ಕಾರ್ಖಾನೆಗಳಲ್ಲಿ ಮಕ್ಕಳು ಬಲವಂತವಾಗಿ ದುಡಿಯುತ್ತಿರುವ ಕುರಿತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಈಚೆಗೆ ವರದಿಯಾಗಿತ್ತು. ನಂತರ ಆಯೋಗ ದಾಳಿ ನಡೆಸಿ 68 ಮಕ್ಕಳನ್ನು ರಕ್ಷಿಸಿದ್ದು, ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಯಿತು ಎಂದರು.
ಅನ್ಯ ರಾಜ್ಯಗಳಿಂದ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಹೆಣ್ಣುಮಕ್ಕಳು ಬಂದಿದ್ದಾರೆ. ಆದರೆ, ಅವರ ಮೂಲ ಪತ್ತೆ ಕಷ್ಟಕರವಾಗಿದೆ. ಆಧಾರ್ ಕಾರ್ಡ್ ಇಲ್ಲ, ಅವರಿಗೆ ಕನಿಷ್ಟ ಯಾವುದೇ ಮೂಲಸೌಕರ್ಯ ನೀಡದೆ, ವೇತನ ಕೊಡದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಸ್ಪಿ ಕೆ.ಪರಶುರಾಮ್ ಮಾತನಾಡಿ, ಇತಿಹಾಸ ಕೆದಕಿದಂತೆಲ್ಲಾ ಮಕ್ಕಳು, ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆದ ಘಟನೆಗಳಿವೆ. ಈಗ ಸ್ವರೂಪ ಬದಲಾಗಿದ್ದು, ಮತ್ತೆ ಮತ್ತೆ ಅವರುಗಳೇ ಗುರಿಯಾಗುತ್ತಿರುವುದು ದುರ್ದೈವದ ಸಂಗತಿ. ಇದನ್ನು ತಡೆಯಲು ಜಿಲ್ಲಾಮಟ್ಟದ ಕಾರ್ಯಪಡೆಗಳ ಸಹಕಾರ ಅತ್ಯಗತ್ಯ. ಆಗ ಮಾತ್ರ ಪ್ರಮಾಣ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಬಾಲಚಂದ್ರನಾಯ್ಕ್ ಉಪನ್ಯಾಸ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷ ಡಾ.ಆರ್. ಪ್ರಭಾಕರ್,ಡಿಎಚ್‌ಒ ಡಾ.ಆರ್.ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಇತರರಿದ್ದರು.
ದೊಡ್ಡ ಸಾಮಾಜಿಕ ಪಿಡುಗು
ಪ್ರಸ್ತುತ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು, ಯುವತಿಯರು ಹಾಗೂ ಮಹಿಳೆಯರನ್ನು ಬಲಿಪಶು ಮಾಡಿ, ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮನಗೂಳಿ ಎಂ ಪ್ರೇಮಾವತಿ ಆತಂಕ ವ್ಯಕ್ತಪಡಿಸಿದರು.
ಮಾನವ ಕಳ್ಳ ಸಾಗಾಣೆ ಗಂಭೀರ ವಿಷಯ. ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. 18 ವರ್ಷದೊಳಗಿನ ಯುವತಿಯರಿಗೆ ಆಮಿಷವೊಡ್ಡಿ, ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಂಭವವಿದೆ. ಅಂಗಾಂಗಗಳನ್ನು ಕತ್ತರಿಸಿ ಭಿಕ್ಷಾಟನೆಗೆ ತಳ್ಳುವ ಜಾಲವಾಗಿದೆ. ಇದನ್ನು ತಡೆಯುವಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಜಾಗರೂಕರಾಗಿ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಕೋಟ್
ವಿಶ್ವಸಂಸ್ಥೆ ಲೈಂಗಿಕ ದೌರ್ಜನ್ಯ, ಅಂಗಾಂಗಗಳ ಮಾರಾಟ, ಬಾಲಕಾರ್ಮಿಕ ಸೇರಿ ಇತರೆ ಅಪರಾಧಗಳಿಗೆ ಮಾನವ ಕಳ್ಳ ಸಾಗಾಣಿಕೆ ಮೂಲ ಕಾರಣವೆಂದು ತಿಳಿಸಿದೆ. ಸಾಗಾಣಿಕೆ ಸಂಬಂಧ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಮುಂದೆಯೂ ನಡೆಯದಂತೆ ಎಚ್ಚರವಹಿಸಿ.
ಎಂ.ವಿಜಯ್, ಹಿರಿಯ ಸಿವಿಲ್ ನ್ಯಾಯಧೀಶ