ಅಶೋಕ ಶೆಟ್ಟರ, ಬಾಗಲಕೋಟೆ: ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಸೈಬರ್ ವಂಚಕರ ಬಲೆಗೆ ಮತ್ತೆ ಮತ್ತೆ ಬೀಳುತ್ತಲೇ ಇದ್ದಾರೆ. ಅದರಲ್ಲೂ ಸುಶಿಕ್ಷಿತರು, ಹೆಚ್ಚೆಚ್ಚು ಶಿಕ್ಷಣ ಪಡೆದವರೇ ಹೀಗೆ ಹಣದಾಸೆಗೆ ಬೆನ್ನುಬಿದ್ದು ಲಕ್ಷ ಲಕ್ಷ ರೂ.ಗಳನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಲೇ ಇವೆ.
ಇದೀಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ಆಗಿರುವ ಮಹಿಳಾ ವೈದ್ಯರೊಬ್ಬರು ವಂಚಕರು ಬೀಸಿದ ಬಲೆಗೆ ಬಿದ್ದು ಐದು ದಿನಗಳಲ್ಲಿ ಭರ್ತಿ ೫೩.೬೫ ಲಕ್ಷ ರೂ.ಗಳಿಗೆ ಕಳೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿಗೆ ಮಹಿಳಾ ವೈದ್ಯಗೆ ವಾಟ್ಸಪ್ ನಲ್ಲಿ ಪಾರ್ಟಟೈಂ ಜಾಬ್ ಬಗ್ಗೆ ಮೆಸೇಜ್ ಬಂದಿತ್ತು. ಇದನ್ನು ನಂಬಿಕೊಂಡ ಆ ವೈದ್ಯ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬಳಿಕ ವೈದ್ಯಳನ್ನು ನಂಬಿಸಲು ವಂಚಕರು ಅಲ್ಪಸ್ವಲ್ಪ ಹಣವನ್ನು ಅವರಿಗೆ ಹಾಕುತ್ತಾರೆ. ಜೊತೆಗೆ ಜಾಸ್ತಿ ದುಡ್ಡನ್ನು ತೊಡಗಿಸಿದರೆ ಕಡಿಮೆ ಅವಽಯಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ. ಇದನ್ನು ನಿಜವೆಂದುಕೊಂಡ ವೈದ್ಯೆ ಹಣ ಹೂಡಿಕೆ ಮಾಡಲು ತಯಾರಾಗುತ್ತಾರೆ.
ಆರಂಭದಲ್ಲಿ ವೈದ್ಯರಿಗೆ ೩೦೦, ೪೦೦, ೧೦೦೦, ೧೫೦೦ ರೂ.ಗಳನ್ನು ಹಾಕುತ್ತಾರೆ. ಬಳಿಕ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಗ್ರುಪ್ ಸೇರುವಂತೆ ಸೂಚಿಸುತ್ತಾರೆ. ಅದರಂತೆ ವೈದ್ಯರು ಮಾಡುತ್ತಾರೆ ಸಹ. ಅದಾಗಲೇ ಆ ಗ್ರುಪ್ ನಲ್ಲಿ ವಂಚಕರ ತಂಡದವರು ಎನ್ನಲಾದ ನಾಲ್ಕೈದು ಜನರು ಸೇರಿಕೊಂಡು, ವಾಟ್ಸಪ್ ನಲ್ಲಿ ತಮಗೆ ಇಷ್ಟು ದುಡ್ಡು ಹಾಕಿದ್ದಕ್ಕೆ ಅಷ್ಟು ಲಾಭ ಬಂತು ಎನ್ನುವ ಬಗ್ಗೆ ಚಾಟಿಂಗ್ ಮಾಡುತ್ತಿರುತ್ತಾರೆ.
ಇದನ್ನು ಗಮನಿಸಿದ ವೈದ್ಯೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಎನ್ನುವ ಆಸೆಗೆ ಬಿದ್ದು ತಾವು ಸಹ ಲಕ್ಷ ಲಕ್ಷ ಹಣವನ್ನು ಹಾಕಲು ತೊಡಗುತ್ತಾರೆ. ಖಾತೆಗಳಿಗೆ ಕೆಲ ಲಕ್ಷಗಳು ಹಾಕಿದ ಬಳಿಕ ನೀವು ಹಾಕಿದ ಖಾತೆಯಲ್ಲಿ ಸ್ವಲ್ಪ ಮಿಸ್ಟೇಕ್ ಹಾಗಿದೆ. ಇನ್ನಷ್ಟು ಜಾಸ್ತಿ ದುಡ್ಡು ಹಾಕಿ ಒಮ್ಮೆಲೆ ಹೆಚ್ಚಿನ ಲಾಭ ಮಾಡಿಕೊಳ್ಳಿ ಎನ್ನುವ ಸಲಹೆ ನೀಡುತ್ತಾರೆ.
ಅದರಂತೆ ವೈದ್ಯರ ಹೆಚ್ಚೆಚ್ಚು ದುಡ್ಡು ಹಾಕುತ್ತಾರೆ. ತಮ್ಮ ಬಳಿ ಅಷ್ಟು ದುಡ್ಡು ಇಲ್ಲವೆಂದು ಸಾಲ ಮಾಡಿ ಒಟ್ಟು ೫೩.೬೫ ಲಕ್ಷ ರೂ.ಗಳನ್ನು ಹಾಕಿದ್ದಾರೆ. ಕೊನೆಗೆ ಆ ವಾಟ್ಸಪ್‌ನಲ್ಲಿ ಇದ್ದ ಎಲ್ಲ ಮೆಸೇಜ್ ಗಳು ಕಣ್ಮರೆ ಆಗಿದ್ದರಿಂದ ಮಹಿಳಾ ವೈದ್ಯರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಅವರ ಕುಟುಂಬದಲ್ಲಿ ವಿಷಯ ತಿಳಿದು, ನಂತರ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
ಹೊರರಾಜ್ಯದ ಮಹಿಳಾ ವೈದ್ಯ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಽಕ ಹಣ ಗಳಿಸುವ ಅವಸರದಲ್ಲಿ ಅರ್ಧ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಆಗಸ್ಟ್ ೨೭ ರಂದು ಅವರ ಖಾತೆಗೆ ದುಡ್ಡು ಹಾಕಲು ಶುರು ಮಾಡಿದ ವೈದ್ಯರು, ಆಗಸ್ಟ್ ೩೧ ರ ವರೆಗೆ ಐದು ದಿನಗಳಲ್ಲಿ ಒಟ್ಟು ೫೩.೬೫ ಲಕ್ಷ ರೂ.ಗಳನ್ನು ಹಾಕಿದ್ದಾರೆ. ಆಗಸ್ಟ್ ೩೧ ರಂದು ರಾತ್ರಿ ವಂಚಕರು ವಾಟ್ಸಪ್ ಗ್ರುಪ್ ಬಂದ್ ಮಾಡಿದ್ದಾರೆ. ಆರಂಭದಲ್ಲಿ ವೈದ್ಯೆ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಬಳಿಕ ಆನ್ ಲೈನ್ ನಲ್ಲಿ ಮೋಸ ಹೋಗಿರುವ ವಿಚಾರ ತಿಳಿಸಿದ್ದರಿಂದ ಸೆಪ್ಟಂಬರ್ ೮ ರಂದು ರಾತ್ರಿ ಸಿಇಎನ್ ಠಾಣೆಗೆ ಬಂದು ದೂರು ನೀಡಿದ್ದಾರೆ. ವಂಚಕರು ಯಾರು ಎಂದು ಇನ್ನೂ ಗೊತ್ತಾಗಿಲ್ಲ. ಆದರೆ, ವಾಟ್ಸಪ್ ನಂಬರ್ ಮಾತ್ರ ಲಭ್ಯವಾಗಿದೆ. ಯಾವ ಖಾತೆಗಳಿಗೆ ಹಣ ಹಾಕಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಂ.ನಾಗಿರಡ್ಡಿ ತಿಳಿಸಿದ್ದಾರೆ.