ಮೈಸೂರು: ಮಾನವೀಯ ಪ್ರಜ್ಞೆಯ ಬದ್ಧತೆಯೇ ಜೀವನದ ಹಾದಿ ಎಂದು ತೋರಿದವರು ಕಾರಂತರು, ಪ್ರಸಿದ್ಧಿಗಾಗಿ ಅವರು ಎಂದೂ ನಾಟಕ ಮಾಡಿದವರಲ್ಲ ಎಂದು ನಟ ಅರುಣ್‌ಸಾಗರ್ ಹೇಳಿದರು.
ರಂಗ ಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ರಂಗಾಯಣದಿಂದ ಸೋಮವಾರದಿಂದ ಆಯೋಜಿಸಿರುವ 5 ದಿನಗಳ ಭಾರತೀಯ ರಂಗ ಸಂಗೀತೋತ್ಸವದಲ್ಲಿ ಮಾತನಾಡಿದರು.
ಕಾರಂತರು ಸದಾ ಚಟುವಟಿಕೆಯಿಂದ ಇರುತ್ತಿದ್ದ ಸಿದ್ಧಿ ಪುರುಷ. ಪ್ರಸಿದ್ಧರಿಗೆ ಸಾವಿದೆ. ಆದರೆ ಸಾಧನೆಯ ಸಿದ್ಧಿ ಕಡೆಗೆ ಹೊರಟವನಿಗೆ ಎಂದಿಗೂ ಸಾವಿಲ್ಲ. ಕಾರಂತರು ಸಾಮಾನ್ಯ ಅಭಿಯನಕ್ಕಿಂತ ಹೊಸ ಪ್ರಯೋಗಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಹೀಗಾಗಿ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಯಿತು ಎಂದು ಬಣ್ಣಿಸಿದರು.
ತಮ್ಮ ಜೀವಿತದ ಕೊನೆಯವರೆಗೂ ಸಂಗೀತವನನ್ನೇ ಉಸಿರಾಗಿಸಿಕೊಂಡಿದ್ದ ಅವರು, ಸರ್ಕಾರ ನೀಡುವ ಯಾವುದೇ ಸವಲತ್ತುಗಳಿಗೆ ಎಂದಿಗೂ ಆಸೆ ಪಟ್ಟವರಲ್ಲ. ಕಲಾಮಂದಿರದಲ್ಲಿ ನೀಡಿದ್ದ ಜಾಗ ನಿರಾಕರಿಸಿ ಹಿಂಭಾಗದ ಹಳ್ಳ, ಕೊಳ್ಳದ ಜಾಗ ಪಡೆದು ಅಲ್ಲಿ ರಂಗಾಯಣ ಸ್ಥಾಪಿಸಿ ಪರಿಸರ ಪ್ರೇಮ ಮೆರೆದರು. ಇದರಿಂದ ನಾವು ರಾಮಮಂದಿರಕ್ಕೆ ಇಟ್ಟಿಗೆ ಹೊರುವ ಮುಂಚೆಯೇ ರಂಗಾಯಣಕ್ಕೆ ಇಟ್ಟಿಗೆ ಹೊತ್ತಿದ್ದೆವು ಎಂದು ಹಳೇ ಘಟನೆ ಮೆಲುಕು ಹಾಕಿದರು.
ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಕಾರಂತರ ರಂಗಭೂಮಿ ನೀಡಿರುವ ಕೊಡುಗೆಯನ್ನು ಯಾವ ಮಾಪನದಿಂದಲೂ ಅಳೆಯಲು ಸಾಧ್ಯವಿಲ್ಲ. ರಂಗಭೂಮಿಗೆ ಇಷ್ಟೊಂದು ದುಡಿದಿರುವ ಕಾರಂತರಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ನಾನು ರಂಗಾಯದ ನಿರ್ದೇಶಕನಾಗುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ನಾನು ಮತ್ತು ನನ್ನ ಮಡದಿ ರಂಗಾಯಣಕ್ಕೆ ಬಂದು ಯಾವುದೋ ಮೂಲೆಯಲ್ಲಿ ಕುಳಿತು ನಾಟಕ ನೋಡಿ ಹೋಗುತ್ತಿದ್ದೆವು. ಕಾರಂತರ ಕೃಪೆಯಿಂದ ರಂಗಾಯಣದಲ್ಲಿ ಸೇವೆ ಮಾಡುವ ಒಂದು ಅವಕಾಶ ದೊರೆತಿದೆ ಎಂದು ಹೇಳಿದರು.ಸಂಗೀತ ನಿರ್ದೇಶಕ ಅಮೋಘ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು. ಬಳಿಕ ಸಂಗೀತ ನಿರ್ದೇಶಕ ಅಮೋಘ ಭಟ್ ಹಾಗೂ ತಂಡ ಬಿ.ವಿ.ಕಾರಂತರ ರಂಗ ಸಂಗೀತದ ಹಾಡುಗಳನ್ನು ಪ್ರಸ್ತುತಪಡಿಸಿತು.