ಜಿಲ್ಲೆ

ಐದು ಅಂತಸ್ತಿನ ಕಾರ್ ಪಾರ್ಕಿಂಗ್ ನಿರ್ಮಾಣ!

ಬೆಳಗಾವಿ: ರಾಜಕೀಯ, ತಾಂತ್ರಿಕ, ಆರ್ಥಿಕ ಸಮಸ್ಯೆಗಳಿಂದಾಗಿ ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ಬಾಪಟ್ ಗಲ್ಲಿಯ ‘ಬಹುಮಹಡಿ ಪಾರ್ಕಿಂಗ್ ಸಂಕೀರ್ಣ’ ನಿರ್ಮಾಣ ಕಾಮಗಾರಿಗೆ ಕೊನೆಗೂ ಮುಕ್ತಿ ದೊರಕಿದೆ.

ನಗರದ ಹೃದಯಭಾಗ ಬಾಪಟ್ ಗಲ್ಲಿಯಲ್ಲಿ ಪಾರ್ಕಿಂಗ್ ಸಮಸ್ಯೆ ಒಂದು ಹಂತದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ 2006ರಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಆರಂಭದಲ್ಲೇ ಕೈ ಬಿಡಲಾಗಿತ್ತು. ಇದೀಗ 2023ರಲ್ಲಿ ಈ ಯೋಜನೆಗೆ ಅಧಿಕೃತವಾಗಿ ಶಾಸಕ ಆಸ್ೀ ಸೇಠ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ಕೊಟ್ಟಿದ್ದಾರೆ.

2017ರಲ್ಲಿ ರಾಜ್ಯ ಸರ್ಕಾರದ 100 ಕೋಟಿ ಅಡಿಯಲ್ಲಿ ವಿಶೇಷ ಅನುದಾನದಲ್ಲಿ ಬಹುಮಹಡಿ ಕಾರ್ ಪಾರ್ಕಿಂಗ್ ಸಂರ್ಕೀಣ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಅಲ್ಲದೆ, ಮುಂಬೈ ಮೂಲದ ಕಂಪನಿಗೆ ಟೆಂಡರ್ ಹಂಚಲಾಯಿತು. ಸುಮಾರು 17 ಮರಗಳನ್ನು ಕಡಿದು ಸ್ಥಳ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಜಿಎಸ್‌ಟಿ ಜಾರಿಗೆ ಬಂದ ನಂತರ ಟೆಂಡರ್ ಪಡೆದುಕೊಂಡಿದ್ದ ಕಂಪನಿ ನಿರ್ಮಾಣದಿಂದ ಹಿಂದೆ ಸರಿದಿದ್ದರಿಂದ ಯೋಜನೆ ಕೈಬಿಡಲಾಗಿತ್ತು. 2019ರಲ್ಲಿ 4.5 ಕೋಟಿ ನಿಧಿಯನ್ನು ಅಮತ್ ನಿಧಿಗೆ ವರ್ಗಾಯಿಸಲಾಯಿತು. ಪರಿಣಾಮ ಪಾರ್ಕಿಂಗ್ ಕಟ್ಟಡ ನಿರ್ಮಾಣ ಯೋಜನೆ ಮೊಟಕುಗೊಂಡಿತ್ತು. ಬಳಿಕ ಮಹಾನಗರ ಪಾಲಿಕೆಯು ಬಹುಮಹಡಿ ಪಾರ್ಕಿಂಗ್ ನಿರ್ಮಾಣದ ಯೋಜನೆಗಳನ್ನು ಕೈಬಿಟ್ಟು ಅನುದಾವನ್ನು ಪರ್ಯಾಯ ಕಾಮಗಾರಿಗಳಿಗೆ ಬಳಸಿಕೊಂಡಿತ್ತು.

ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಸಾರ್ವಜನಿಕ ಸಹ ಭಾಗಿತ್ವದಲ್ಲಿ (ಪಿಪಿಪಿ) 12 ಗುಂಟೆ ಪ್ರದೇಶದಲ್ಲಿ 6.65 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ಮಲ್ಟಿಲೆವೆಲ್ ಕಾರ್ ಪಾಕಿರ್ಂಗ್ ನಿರ್ಮಾಣವಾಗಲಿದ್ದು, ಬರೋಬ್ಬರಿ 120 ಕಾರುಗಳನ್ನು ಒಟ್ಟಿಗೆ ಪಾರ್ಕಿಂಗ್ ಮಾಡಬಹುದಾಗಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಪಿಪಿಪಿ ಸಹಭಾಗಿತ್ವದಲ್ಲಿ ನಿರ್ಮಾಣ: ಸ್ಮಾರ್ಟ್‌ಸಿಟಿ ಯೋಜನೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಾಪಟ್ ಗಲ್ಲಿಯಲ್ಲಿರುವ ಪಾಲಿಕೆಯ 12 ಗುಂಟೆ ಸ್ಥಳದಲ್ಲಿ ಕಾರು ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಟೆಂಡರ್ 2022ರಲ್ಲಿ ಕರೆಯಲಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಇತರ ಕಾರಣಗಳಿಂದಾಗಿ ಕಾಮಗಾರಿಗೆ ಚಾಲನೆ ನೀಡಿರಲಿಲ್ಲ. ಈಗ ಚಾಲನೆ ದೊರಕಿದೆ. ಸ್ಮಾರ್ಟ್‌ಸಿಟಿ ಯೋಜನೆ ಅಡಿ 2 ಕೋಟಿ ರೂ. ಹಾಗೂ ಪಿಪಿಪಿ 4.65 ಕೋಟಿ ರೂ. ಸೇರಿ ಒಟ್ಟು 6.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ಎಂಡಿ ಸಯಿದಾ ಆಫ್ರಿನ್ ಬಳ್ಳಾರಿ ತಿಳಿಸಿದ್ದಾರೆ.

ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಇದೀಗ ಬಾಪಟ್ ಗಲ್ಲಿಯಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.| ಆಸ ಸೇಠ್ ಶಾಸಕ