ಜಿಲ್ಲೆ

ಐದಳ್ಳಕಾವಲು ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಗೊಂದಲ ಶೀಘ್ರ ಇತ್ಯರ್ಥ!?..

ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಗೆ ಬೇಲೂರು ತಾಲೂಕು ಐದಳ್ಳ ಕಾವಲು ಗ್ರಾಮದ ವ್ಯಾಪ್ತಿಯ ಕಾಮಗಾರಿ ಪೂರ್ಣಗೊಳ್ಳುವುದು ಮುಖ್ಯವಾಗಿದ್ದು, ಅಲ್ಲಿ ಜಮೀನಿನ ಮಾಲೀಕತ್ವದ ಕುರಿತು ಇರುವ ಗೊಂದಲ ಶೀಘ್ರ ಇತ್ಯರ್ಥಪಡಿಸಲು ಉನ್ನತ ಮಟ್ಟದ ಸಭೆಯ ಅಗತ್ಯ ಇರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಎತ್ತಿನಹೊಳೆ ಯೋಜನೆ ಮುಖ್ಯ ಇಂಜಿನಿಯರ್ ಮಾಧವ್ ಅವರಿಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸೂಚನೆ ನೀಡಿದರು.


ಎತ್ತಿನಹೊಳೆ ಯೋಜನೆಗೆ ಬೇಲೂರು ತಾಲೂಕಿನ ಐದಳ್ಳ ಕಾವಲು ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಈ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಐದಳ್ಳಕಾವಲು ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ಹಾದು ಹೋಗುವ ಜಾಗವು ಜನವಸತಿ ಪ್ರದೇಶವಾಗಿದೆ. ಅಲ್ಲಿ ಭೂಮಿ ಮಂಜೂರಾತಿಯಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೆ ಸದರಿ ಭೂಮಿಯು ತನ್ನ ವ್ಯಾಪ್ತಿಗೆ ಸೇರಬೇಕೆಂದು ಅರಣ್ಯ ಇಲಾಖೆ ಸಹ ಪ್ರತಿಪಾದಿಸುತ್ತಿರುವುದರಿಂದ ಪರಿಹಾರ ವಿತರಣೆ ಮತ್ತು ಕಾಮಗಾರಿ ಮುಂದುವರಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.


ಐದಳ್ಳಕಾವಲು ಗ್ರಾಮದ ಭೂಸ್ವಾಧೀನಕ್ಕೆ ಒಳಪಡುವ ಒಟ್ಟು ವಿಸ್ತೀರ್ಣ 127 ಎಕರೆ 34 ಗುಂಟೆಗಳು. ಭೂಸ್ವಾಧೀನಕ್ಕೆ ಒಳಪಡುವ ಒಟ್ಟು ರೈತರು 69 ಜನ. ಆರ್‌ಟಿಸಿ ಪ್ರಕಾರ ಹಿಡುವಳಿ ವಿಸ್ತೀರ್ಣ 117 ಎಕರೆ 32 ಗುಂಟೆಗಳು. ಆರ್‌ಟಿಸಿ ಪ್ರಕಾರ ಸರ್ಕಾರಿ ವಿಸ್ತೀರ್ಣ 10 ಎಕರೆ 2 ಗುಂಟೆಗಳು. ಐದಳ್ಳಕಾವಲು ಒಟ್ಟು ವಿಸ್ತೀರ್ಣ 3618.37 ಎಕರೆಗಳು. ಅರಣ್ಯ ಭೂಮಿ 2250 ಎಕರೆ, ಸರ್ಕಾರಿ ಭೂಮಿ 1194.12 ಎಕರೆ ಮತ್ತು ಸ್ವಾಧೀನದಾರರ ಭೂಮಿ ವಿಸ್ತೀರ್ಣ 174.25 ಎಕರೆಗಳಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಎತ್ತಿನಹೊಳೆ ಯೋಜನೆ ಅಧೀಕ್ಷಕ ಇಂಜಿನಿಯರ್ ಅನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ವಿಶೇಷ ಭೂಸ್ವಾಧೀನ ಅಧಿಕಾರಿ ಮಾರುತಿ ಮತ್ತಿತರರು ಭಾಗವಹಿಸಿದ್ದರು.