ಜಿಲ್ಲೆ

ಐದನೇ ತಾರೀಕಿನೊಳಗೆ ವೇತನಕ್ಕೆ ಕ್ರಮ ಸ್ವಾಗತಾರ್ಹ

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಡಿ ಗ್ರೂಪ್ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗಡೆ ಸಂಬಳ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಸಂಬಳ ಆಗದಿದ್ದ ಕಾರಣಕ್ಕೆ ಹೊಂಗನೂರು ಗ್ರಾಪಂ ನೀರಗಂಟಿ ಚಿಕ್ಕೂಸನಾಯಕ ಆತ್ಮಹತ್ಯೆ ಮಾಡಿಕೊಂಡರು. ಕಲಬುರುಗಿ ಜಿಲ್ಲೆ ಮುಳಖೇಡದ ಗ್ರಾಪಂ ಗ್ರಂಥಪಾಲಕಿ ಭಾಗ್ಯವತಿ ಎಂಬುವರಿಗೆ ಮೂರು ತಿಂಗಳಿನಿಂದ ಸಂಬಳ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರಕ್ಕೆ ಎಚ್ಚರವಾಗಿದೆ. ಇದೀಗ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಸಂಬಳ ನೀಡುವ ಆದೇಶವನ್ನು ನೀಡಿದೆ. ಆದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ ಎಂದರು.

ರಾಜ್ಯದಲ್ಲಿರುವ 5,900 ಗ್ರಾಪಂಗಳಲ್ಲಿ 63 ಸಾವಿರ ಗ್ರೂಪ್ ಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಸರ್ಕಾರಿ ನೌಕರರಾಗಿರುತ್ತಾರೆ. ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮೆನ್, ಅಟೆಂಡರ್, ಸ್ವೀಪರ್ಸ್ ಮತ್ತು ಕೆಲವು ಕಡೆಗಳಲ್ಲಿ ಎಲೆಕ್ಟ್ರಿಷಿಯನ್ಸ್ ಸರ್ಕಾರಿ ನೌಕರರಲ್ಲ. ಇವರೆಲ್ಲರೂ ಪಂಚಾಯಿತಿ ನೌಕರರಾಗಿರುತ್ತಾರೆ ಅಷ್ಟೇ. ಈ 63 ಸಾವಿರ ಪಂಚಾಯಿತಿ ಡಿ ಗ್ರೂಪ್ ನೌಕರರಲ್ಲಿ 38 ಸಾವಿರ ನೌಕರರನ್ನು ಸರ್ಕಾರ ಅನುಮೋದನೆ ಮಾಡಿಕೊಂಡು ಕನಿಷ್ಠ ವೇತನ ನೀಡುತ್ತಿದೆ. ಇನ್ನುಳಿದ ಸುಮಾರು 28 ಸಾವಿರ ನೌಕರರು ಸರ್ಕಾರದಿಂದ ಅನುಮೋದನೆಗೊಳ್ಳದ ಕಾರಣ 5-8 ಸಾವಿರ ರೂ.ಗೆ ಕೆಲಸ ಮಾಡುತ್ತಿದ್ದಾರೆ. ಈ ಗ್ರಾಪಂ ನೌಕರರ ಸೇವೆ ಬಹಳ ಅತ್ಯಗತ್ಯದ ಸೇವೆಯನ್ನು ನೀಡುತ್ತಾರೆ. ಹಾಗಾಗಿ ಇವರೆಲ್ಲರನ್ನು ಸರ್ಕಾರ ಕಾಯಂ ನೌಕರರನ್ನಾಗಿ ಮಾಡಿ, ಕನಿಷ್ಠ ವೇತನ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನಾಗರಿಕರ ಕೆಲಸಗಳು ಸುಲಲಿತವಾಗಿ ನಡೆಯಬೇಕೆಂದರೆ ಮತ್ತು ನೌಕರರ ಮೇಲೆ ಜವಾಬ್ದಾರಿ ಹೇರಬೇಕೆಂದರೆ ಅವರೆಲ್ಲರೂ ಸರ್ಕಾರದ ಭದ್ರತೆಗೆ ಒಳಪಡಬೇಕು ಎಂದರು.

ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅದರಂತೆ ಸಂಬಳ ನೀಡಲು ಸರ್ಕಾರದ ಬಳಿ ದುಡ್ಡು ಇರುವುದಿಲ್ಲ. ಏಕೆಂದರೆ ಸರ್ಕಾರದಿಂದ ಅನುಮೋದನೆಗೊಂಡಿರುವ ನೌಕರರಿಗೆ ಮೂರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಈ ಪರಿಸ್ಥಿತಿ ನಡುವೆ ಮತ್ತೊಂದು ಸಮಸ್ಯೆ ಕೂಡ ಇದೆ. ಕೊಳ್ಳೇಗಾಲ ಕ್ಷೇತ್ರದ ಹೊಂಗನೂರು ಗ್ರಾಪಂನಲ್ಲಿ 6.5 ಲಕ್ಷ ರೂ. ವರ್ಷಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಅಂತೆಯೇ, ಟಗರಪುರ 20 ಲಕ್ಷ ರೂ., ಕುಂತೂರು 30 ಲಕ್ಷ ರೂ., ಮುಳ್ಳೂರು 24 ಲಕ್ಷ ರೂ., ಸಿದ್ದಯ್ಯನಪುರ ಗ್ರಾಪಂ 15 ಲಕ್ಷ ರೂ., ತಿಮ್ಮರಾಜೀಪುರ ಗ್ರಾಪಂ 7 ಲಕ್ಷ ರೂ.ಇದೆ. ಆದರೆ, ಕನಕಪುರ ಗ್ರಾಪಂವೊಂದರಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹವಾಗಲಿದೆ. ಮೈಸೂರು, ಬೆಂಗಳೂರು ನಗರ ಪ್ರದೇಶಗಳ ಆಜುಬಾಜಿನಲ್ಲಿರುವ ಪಂಚಾಯಿತಿಗಳಲ್ಲಿ 1 ಕೋಟಿ ರೂ.ಗೂ ಮೀರಿದ ತೆರಿಗೆ ಸಂಗ್ರಹ ಕಾಣಬಹುದು. ಇಂತಹ ಸ್ಥಳಗಳಲ್ಲಿ ಪ್ರತಿ ತಿಂಗಳು ಪಂಚಾಯಿತಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುತ್ತದೆ. ಆದರೆ ಕೊಳ್ಳೇಗಾಲ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಂಚಾಯತಿಗಳಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಸಂಬಳ ನೀಡಲು ಸಾಧ್ಯವಾಗುವುದಿಲ್ಲ. 5-10 ಸಾವಿರಗಳಿಗೆ ಕೆಲಸ ಮಾಡಿಸಿಕೊಳ್ಳುವುದನ್ನು ಕಾರ್ಮಿಕ ಇಲಾಖೆ ಪರಿಗಣಿಸಿ ಕನಿಷ್ಠ ವೇತನ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಒಟ್ಟಾರೆ ಈ ಹಗರಣವನ್ನು ಸರಿಪಡಿಸಲು ಮುಂದಾಗಿರುವ ಸಚಿವ ಪ್ರಿಯಾಂಕ ಖರ್ಗೆ ಅವರ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.