ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಭೌಗೋಳಿಕವಾಗಿ 8 ಸಾವಿರ ಹೆಕ್ಟೇರ್ ಭೂ ಪ್ರದೇಶ ಹೊಂದಿದ್ದು, ಅರ್ಧಕ್ಕೂ ಅಧಿಕ ಅರಣ್ಯದಿಂದ ಕೂಡಿದ ಗ್ರಾಮವಾಗಿದೆ.
ಗ್ರಾಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಚೆನ್ನಯ್ಯ ರಾಜ ಕೋಟೆ ಇದ್ದ ಜಾಗವೇ ಇಂದಿನ ಚೆನ್ನಯ್ಯನ ಕೋಟೆಯಾಗಿದೆ. ಚೆನ್ನಯ್ಯ ರಾಜ ತನ್ನ ಸಾಮ್ರಾಜ್ಯ ಸ್ಥಾಪಿಸಿ ಅರಮನೆಯ ಸುತ್ತ ಕೋಟೆ ನಿರ್ಮಿಸಿದ್ದ. ಕೋಟೆಯ ಸುತ್ತಲೂ ಕಂದಕ ತೋಡಿದ್ದರ ಕುರುಹುಗಳು ಗ್ರಾಮದಲ್ಲಿ ಪತ್ತೆಯಾಗಿವೆ. ಈ ಗ್ರಾಮದಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗೆ ನಿವೇಶನ ಇರಲಿಲ್ಲ. ಆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪರಿಷತ್ ವತಿಯಿಂದ ಕಂದಕಗಳಿಗೆ ಮಣ್ಣು ಹಾಕಿ ಮುಚ್ಚಿದ ಬಳಿಕ ನಿವಾಸಿಗಳಿಗೆ ನಿವೇಶನ ನೀಡಲಾಯಿತು. ಅಂದು ನೀಡಿದ 300 ಮನೆಗಳು ಪ್ರಸ್ತುತ 500ರ ಗಡಿ ದಾಟಿವೆ.
ಕೋಟೆಯಾಗಿದ್ದ ಜಾಗವನ್ನು ಈಗ ಕೋಟೆ ಪೈಸಾರಿ ಎಂದು ಕರೆಯಲಾಗುತ್ತದೆ. ಕೋಟೆ ಪೈಸಾರಿಯ ಸುತ್ತಲೂ ಪೂರ್ವ ಮತ್ತು ಉತ್ತರಕ್ಕೆ ಮೂರು ಹೆಬ್ಬಾಗಿಲುಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಪಶ್ಚಿಮ ಭಾಗದಲ್ಲಿ 5 ಎಕರೆ ವಿಸ್ತೀರ್ಣದ ಕೆರೆ ಇದೆ. ಬಾಣಂಗಾಲ ಲಕ್ಕಯ್ಯ ಅವರು ರಾಜನ ಆಸ್ಥಾನದ ದಿವಾನರಾಗಿದ್ದರು. ರಾಜನ ಸಹೋದರಿ ದೇವಮ್ಮಾಜಿ ಕೂಡ ಚೆನ್ನಯ್ಯನ ಕೋಟೆ ಸಮೀಪದ ಅರಣ್ಯದೊಳಗೆ ಬಂಗಲೆ ಬೆಟ್ಟದಲ್ಲಿ ಅರಮನೆ ನಿರ್ಮಿಸಿ ವಾಸವಿದ್ದರು. ಅವರ ವಾಸದ ಕುರುಹುಗಳು ಅರಣ್ಯದಲ್ಲಿದ್ದು, ದೇವಮ್ಮಾಜಿ ಎಂಬ ಹೆಸರು ಕಾಲಕ್ರಮೇಣ ದೇವ ಮಚ್ಚಿ ಆಗಿದೆ. ತಿತಿಮತಿ ವಲಯದ ಮೀಸಲು ಅರಣ್ಯ ಪ್ರದೇಶವನ್ನು ಸರ್ಕಾರಿ ದಾಖಲೆಗಳಲ್ಲಿ ದೇವಮಚ್ಚಿ ಅರಣ್ಯ ಎಂದು ಕರೆಯಲಾಗುತ್ತಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ದಿಡ್ಡಳ್ಳಿ, ಬಸವನಹಳ್ಳಿ, ಚೊಟ್ಟೆಪಾರೆ, ಕೋಟೆ ಮುಚ್ಚಿ, ಕೆಸುವಿನ ಕೆರೆ, ಚಿಕ್ಕ ರೇಷ್ಮೆ, ದಯದಡ್ಡು ಎಂಬ ಏಳು ಹಾಡಿಗಳಿದ್ದು, ಎರಡು ಕಂದಾಯ ಗ್ರಾಮವಿದೆ. ಒಟ್ಟು 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕೃಷಿ ಕಾರ್ಮಿಕ ಕುಟುಂಬಗಳು ಈ ಗ್ರಾಮದಲ್ಲಿ ಹೆಚ್ಚಾಗಿವೆ. ಬುಡಕಟ್ಟು ಜನಾಂಗದ 800ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದ ವ್ಯಾಪ್ತಿಯಲ್ಲಿ ವಾಸವಾಗಿವೆ. ಮೂರು ಸರ್ಕಾರಿ ಶಾಲೆಗಳು, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಏಳು ಅಂಗನವಾಡಿ ಕೇಂದ್ರಗಳು ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇವೆ.