ಬೆಂಗಳೂರು ಗ್ರಾಮಾಂತರ: ವಿಶ್ವದಲ್ಲಿ ಭಾರತ ಒಂದು ಸಾರ್ವಭೌಮ, ಸ್ವಾತಂತ್ರ್ಯ ರಾಷ್ಟವೆಂದು ಸಾರಿದ ಐತಿಹಾಸಿಕ ದಿನವೇ ಗಣರಾಜ್ಯೋತ್ಸವ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೇವನಹಳ್ಳಿ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ 1950ರ ಜ.26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಲಾಯಿತು ಎಂದರು.
ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟವಾಗಿದೆ. ರಾಷ್ಟಕ್ಕೆ ಉತ್ಕೃಷ್ಟ ಮತ್ತು ಸರ್ವಶ್ರೇಷ್ಠ ಸಂವಿಧಾನ ನೀಡುವ ನಿಟ್ಟಿನಲ್ಲಿ ರಾಷ್ಟದ ಅಗ್ರಗಣ್ಯ ಚಿಂತಕರ ಹಾಗೂ ತಜ್ಞರ ಚಿಂತನೆಯ ಫಲವಾಗಿ ಭಾರತ ಸಂವಿಧಾನ ರೂಪುಗೊಂಡಿತು. ರಾಷ್ಟ್ರಪಿತ ಮಹಾತ್ಮ ಗಾಂಧಿ, ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ನೇತಾಜಿ ಸುಭಾಸ್‌ಚಂದ್ರ ಬೋಸ್‌ರಂಥ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯಕ್ಕೆ ಬೆಲೆಕಟ್ಟಲಾಗದು ಎಂದರು.
ಸರ್ವಸ್ವತಂತ್ರ ಸಾರ್ವಭೌಮ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಪ್ರಪಂಚದಲ್ಲಿ ಮಾದರಿ ಎನಿಸುವ ಪ್ರಜಾಪ್ರಭುತ್ವ ಅಳವಡಿಸಿಕೊಳ್ಳಲಾಗಿದೆ. ಪ್ರಪಂಚದಲ್ಲಿಯೇ ಹಲವು ಭಾಷೆ, ಪಂಗಡ, ವೈವಿಧ್ಯತೆ ಹೊಂದಿರುವ ಏಕೈಕ ದೇಶ ನಮ್ಮದು ಎನ್ನಲು ಹೆಮ್ಮೆ ಎನಿಸುತ್ತದೆ ಎಂದರು.
ನಿರೀಕ್ಷೆ ಇರಲಿಲ್ಲ: ನನಗೆ ಬೆಂ.ಗ್ರಾಮಾಂತರ ಜಿಲ್ಲಾ ಉಸ್ತುವಾರಿ ವಹಿಸುವ ನಿರೀಕ್ಷೆ ಇರಲಿಲ್ಲ, ಆದರೆ ಸಿಎಂ ಜವಾಬ್ದಾರಿ ವಹಿಸಿದ ಮೇಲೆ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ಡಾ.ಕೆ.ಸುಧಾಕರ್ ಹೇಳಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಯಾವುದಾದರೂ ಸಾರ್ವಜನಿಕ ಸೇವೆ ಮಾಡುವುದು ಜನಪ್ರತಿನಿಧಿಯಾದವರ ಕರ್ತವ್ಯ. ಆದ್ದರಿಂದ ಈ ಬಗ್ಗೆ ಅಸಮಾಧಾನವಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ. ಗ್ರಾಮಾಂತರ ಚಿಕ್ಕಬಳ್ಳಾಪುರದ ಪಕ್ಕದ ಜಿಲ್ಲೆಯೇ ಆಗಿರುವುದರಿಂದ ಇಲ್ಲಿನ ಜನರ ಪರಿಚಯ ನನಗೆ ಇದೆ ಎಂದರು.