ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದಲ್ಲಿರುವ ಐತಿಹಾಸಿಕ ಕಲ್ಲಿನಕೋಟೆಯಲ್ಲಿ ಅಭಿವೃದ್ಧಿ ಕೈಗೊಳ್ಳಲು ಮಂಗಳವಾರ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ನೇತೃತ್ವದಲ್ಲಿ ಜಿಲ್ಲಾಡಳಿತ, ಭಾರತೀಯ ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಯಿತು.
ಪ್ರವಾಸೋದ್ಯಮ ಇಲಾಖೆ ಕೋಟೆ ಅಭಿವೃದ್ಧಿಗಾಗಿ 8.11 ಕೋಟಿ ರೂ. ಅನುದಾನ ನೀಡಿದ್ದರೂ ಏಕೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣಗಳೇನು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ದಿವ್ಯಾಪ್ರಭು ಅವರು ಪ್ರಶ್ನಿಸಿದರು.
ಪುರಾತನ ದೇಗುಲಗಳ ಜೀರ್ಣೋದ್ಧಾರ, ಗೋಪಾಲಸ್ವಾಮಿ ಹೊಂಡದಿಂದ ಕೋಟೆ ದ್ವಾರದವರೆಗೂ ನೀರಿನ ಪೈಪ್‌ಲೈನ್ ಅಳವಡಿಕೆ, ಪ್ರವಾಸಿಗರ ಅನುಕೂಲಕ್ಕಾಗಿ 81 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ, 3.98 ಕೋಟಿ ರೂ. ವೆಚ್ಚದಲ್ಲಿ ಇಡೀ ಕೋಟೆಯಲ್ಲಿ ಪಾತ್‌ವೇ, ಉದ್ಯಾನ, ಮಕ್ಕಳ ಆಟಿಕೆ ಸಾಮಗ್ರಿ ಸೇರಿ ಪ್ರಾಚೀನತೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟಾಗದಂತೆ ತ್ವರಿತವಾಗಿ ಅಭಿವೃದ್ಧಿಪಡಿಸಲು ಮುಂದಾಗಿ ಎಂದು ತಾಕೀತು ಮಾಡಿದರು.
ಕೋಟೆಯ ಪ್ರಗತಿಗಾಗಿ ಹೆಚ್ಚುವರಿ ಅನುದಾನ ಕೂಡ ಬಂದಿದ್ದು, ನೀಲ ನಕ್ಷೆ ಸಿದ್ಧಪಡಿಸಿ ಜು. 25ರೊಳಗೆ ಸಲ್ಲಿಸಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಇಲ್ಲದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇಲಾಖೆಯ ಸೂಪರಿಂಟೆಂಡೆಂಟ್ ಪುರಾತತ್ವಾಧಿಕಾರಿ ಬಿಪಿನ್ ಚಂದ್ರ, ಕಿರಣ್‌ರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜೀತೇಂದ್ರ ಇತರರಿದ್ದರು.