ಜಿಲ್ಲೆ

ಐತಿಹಾಸಿಕ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿ

ನಿಪ್ಪಾಣಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಗರಕ್ಕೆ ಭೇಟಿ ನೀಡಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏ.೧೫ರಂದು ಸಂಜೆ ೪ಕ್ಕೆ ಸ್ಥಳೀಯ ಮುನಿಸಿಪಲ್ ಮೈದಾನದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ಬಸವಜ್ಯೋತಿ ಗಾರ್ಮೆಂಟ್ಸ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ.೧೧ರಂದು ಬೆಂಗಳೂರಿನಿಂದ ಹೊರಟ ಭೀಮರಥ ಏ.೧೫ರಂದು ನಗರಕ್ಕೆ ಆಗಮಿಸಲಿದೆ. ಅದನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಭೀಮರಥವು ತಾಲೂಕಿನ ಸ್ತವನಿಧಿ ಬಳಿ ಬಂದಾಗ ಬೃಹತ್ ಬೈಕ್ ರ‍್ಯಾಲಿಯ ಮೂಲಕ ಸ್ವಾಗತಿಸಿ ಮುನಿಸಿಪಲ್ ಪ್ರೌಢಶಾಲೆಯ ಮೈದಾನದವರೆಗೆ ಅದ್ದೂರಿಯಾಗಿ ಕರೆತರಲಾಗುವುದು. ಈ ಉತ್ಸವವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸೋಣ, ಉತ್ಸವ ಯಶಸ್ಸಿಗೆ ಶ್ರಮಿಸಿ ಎಂದು ಕರೆ ನೀಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಮಾಜಿ ಅಧ್ಯಕ್ಷ ವಿಲಾಸ್ ಗಾಡಿವಡ್ಡರ್, ಸುಹಾಸ ಗೂಗೆ, ಸುಭಾಷ ಮೆಹ್ತಾ, ಗೋಪಾಳ ನಾಯಿಕ, ಪ್ರಮೋದ ಕಾಂಬಳೆ ಮಾತನಾಡಿದರು. ಸಭೆಯ ಆರಂಭದಲ್ಲಿ ಡಾ. ಅಂಬೇಡ್ಕರ್ ಅವರಿಗೆ ಮೌನಾಚರಣೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಗರಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸ್ಥಾಯಿ ಸಮಿತಿ ಚೇರ್ಮನ್ ಡಾ. ಜಸರಾಜ ಗಿರೆ, ಸದಸ್ಯ ಜಯವಂತ ಭಾಟಲೆ, ಸುನೀಲ ಪಾಟೀಲ, ಪ್ರಕಾಶ ಶಹಾ, ಡಾ.ಚಂದ್ರಕಾಂತ ಕುರಬೆಟ್ಟಿ, ಶ್ರೀಕಾಂತ ಪರಮನೆ, ಸುರೇಶ ಶೆಟ್ಟಿ, ಡಾ.ಶಂಕರಗೌಡ ಪಾಟೀಲ ಇತರರಿದ್ದರು. ಸಿದ್ಧು ನರಾಟೆ ಸ್ವಾಗತಿಸಿದರು. ಪ್ರಣವ ಮಾನವಿ ನಿರೂಪಿಸಿದರು. ವಿಜಯ ಟವಳೆ ವಂದಿಸಿದರು.

ಸ್ಥವನಿಧಿ ಬಳಿಯ ಗುಡ್ಡದ ಮೂರ್ತಿ ಪ್ರತಿಷ್ಠಾಪನೆ

ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಬಂದ ಸಮಯದಲ್ಲಿ ವಾಯು ವಿಹಾರಕ್ಕೆ ಹೋದ ಸ್ಥವನಿಧಿ ಬಳಿ ಇರುವ ಗುಡ್ಡದ ಮೇಲೆ ೧೦ ಎಕರೆ ಸ್ಥಳ ಖರೀದಿ ಮಾಡಿದ್ದು, ಇಲ್ಲಿ ಅಶ್ವಾರೂಢ ಅಂಬೇಡ್ಕರ್ ಮೂರ್ತಿಪ್ರತಿಷ್ಠಾಪನೆ, ಕ್ರಾಂತಿಸ್ತ0ಭ, ಬೌದ್ದ ಮ್ಯೂಜಿಯಂ, ಲೈಬ್ರರೀ ಹಾಗೂ ಸಭಾಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ ಎಂದು ಶಾಸಕ ಶಶಿಕಲಾ ಜೊಲ್ಲೆ ಹೇಳಿದರು. ಚಿಕ್ಕೋಡಿಯ ಜಿಲ್ಲಾ ಬಿಜೆಪಿ ಕಚೇರಿಯ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧.೨೦ ಕೋಟಿ ರೂ. ಅನುದಾನ ಈಗಾಗಲೇ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದೆ. ನಾನು ನನ್ನ ಶಾಸಕರ ಅನುದಾನದಲ್ಲಿ ೧ ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಶಾಂಭವಿ ಅಶ್ವತ್ಥಪುರ, ಬಾಬಾಸಾಹೇಬ ಕೆಂಚನ್ನವರ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ ಇದ್ದರು.