ಬೆಳಗಾವಿ: ನಗರದ ಮಾಳಮಾರುತಿ ವ್ಯಾಪ್ತಿಯಲ್ಲಿ ಬರುವ ವಂಟಮೂರಿ ಕಾಲನಿ, ಶ್ರೀನಗರ ಹಾಗೂ ಕಾಕತಿಯಲ್ಲಿರುವ ರಕ್ಷಣಾ ಇಲಾಖೆಯ ಅರಣ್ಯ ಪ್ರದೇಶವನ್ನು ಖಾಸಗಿ
ಕಂಪನಿಗಳಿಗೆ ಹಸ್ತಾಂತರ ಮಾಡಬಾರದು ಎಂದು ಆಗ್ರಹಿಸಿ ಸ್ಥಳೀಯರು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀನಗರ ಸಾಯಿಬಾಬಾ ಮಂದಿರದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 745 ಎಕರೆ ಪ್ರದೇಶದಲ್ಲಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ವಿವಿಧ ರೀತಿಯ ಮರಗಳನ್ನು ನೆಟ್ಟು ಬೆಳೆಸಿದ್ದು ಸುಂದರ ನಿಸರ್ಗ ಪ್ರದೇಶವಾಗಿದೆ. ಈ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಹೊರತುಪಡಿಸಿ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಉಸಿರಾಡುವುದಕ್ಕೆ ಸ್ವಸ್ಥ ಗಾಳಿ ಹಾಗೂ ವಾಯು ವಿಹಾರಕ್ಕಾಗಿ ಬೇರೆ ಪ್ರದೇಶಗಳಿಲ್ಲ.
ಈ ಕಾಯ್ದಿಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯ ಜಮೀನನ್ನು ಐಟಿ ಮತ್ತು ಬಿಟಿ ಕಂಪನಿಗಳಿಗೆ ಹಸ್ತಾಂತರಿಸಿದರೆ ಸಾರ್ವಜನಿಕರ, ಹಿರಿಯ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಯೋಜಿತ ಯೋಜನೆಯನ್ನು ಕೈ ಬಿಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಪರಿಸರವಾದಿ ಶಿವಾಜಿ ಕಾಗಣಿಕರ್, ರಾಜಕುಮಾರ ಟೋಪಣ್ಣವರ, ಆರ್.ಪಿ.ಪಾಟೀಲ, ಎನ್.ಆರ್.ಲಾತೂರ, ಸುಜಿತ ಮುಳಗುಂದ, ಶಂಕರ ಹೆಗಡೆ, ಅಖಿಲಾ ಪಠಾಣ ಇದ್ದರು.