ಜಿಲ್ಲೆ

ಐಕ್ಯತೆಗಾಗಿ ಅಂಬೇಡ್ಕರ್ ಉತ್ಸವ ಸೆ. 4ಕ್ಕೆ

Chitradurga - Desk - Pranav Kumar

ಚಿತ್ರದುರ್ಗ: ಎಲ್ಲಾ ಸಮುದಾಯದವರಲ್ಲೂ ಐಕ್ಯತೆ ತರುವ ಉದ್ದೇಶದಿಂದ ತರಾಸು ರಂಗಮಂದಿರದಲ್ಲಿ ಸೆ. 4ರಂದು ಬೆಳಗ್ಗೆ 11ಕ್ಕೆ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ‘ಅಂಬೇಡ್ಕರ್ ಉತ್ಸವ ಚಿತ್ರದುರ್ಗ-2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸಮಾಜದ ಸಾಮರಸ್ಯ ವಿದ್ಯಾರ್ಥಿಗಳಿಂದಲೇ ಸಾಧ್ಯವೆಂದು ಅರಿತು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಅಹ್ವಾನಿಸಿದ್ದೇವೆ ಎಂದರು.

ಚಾಮರಾಜನಗರ ನಳಂದ ಬೌದ್ಧ ವಿಹಾರ ಬೋಧಿಧತ್ತ ತೇರಾ ಬಂತೇಜಿ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕರ್ನಾಟಕ ದಸಂಸ ಚಾಲನಾ ಸಮಿತಿ ಸದಸ್ಯ ಮಾವಳ್ಳಿ ಶಂಕರ್, ಮುಖಂಡ ಶಿವರಾಜ್, ಜಿಲ್ಲೆಯ ಎಲ್ಲಾ ಶಾಸಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂದು ಬೆಳಗ್ಗೆ 10ಕ್ಕೆ ಜನಪದ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಚಾಲನೆ ನೀಡುವರು. ನಾಲ್ಕೈದು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ ಎಂದರು.

ವಕೀಲ ಸಿ.ಕುಮಾರ್, ಜಯಪ್ಪ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಕಮಂಡಲಗುಂದಿ ಎಲ್.ಶಾಂತಕುಮಾರ್, ಮುಖಂಡರಾದ ಎಸ್.ಪರಮೇಶ್, ತಿಪ್ಪೇಸ್ವಾಮಿ, ಇಂದೂಧರ್, ಗೌತಮ್, ಸಂತೋಷ್, ಪ್ರಾಧ್ಯಾಪಕ ತಿಪ್ಪೇಸ್ವಾಮಿ ಇತರರಿದ್ದರು.