ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಐಕನಳಮ್ಮ, ವೀರಭದ್ರೇಶ್ವರ ಸ್ವಾಮಿ ಹಬ್ಬದ ಅಂಗವಾಗಿ ಬುಧವಾರ ರಾತ್ರಿ ಸಿಡಿಹಬ್ಬ ಅದ್ದೂರಿಯಾಗಿ ಆರಂಭವಾಯಿತು.
ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ರಾತ್ರಿ ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ನೂರಾರು ಭಕ್ತರು ಆಗಮಿಸಿದ್ದರು. ನಿರಂತರ ಮಳೆಯಿಂದ ಹಬ್ಬ ಆಚರಣೆಗೆ ಸ್ವಲ್ಪ ಅಡಚಣೆಯಾಯಿತು. ಈ ಬಾರಿ ಹುಚ್ಚಮ್ಮನ ವಠಾರದ ಭಕ್ತರು ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿದ್ದರು.
ಐಕನಳ್ಳಮ್ಮ ದೇಗುಲ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಸಲುವಾಗಿ ಪುಟ್ಟ ಗುಡಿಯಲ್ಲಿ ದೇವರನ್ನು ಇಟ್ಟು ಪೂಜಿಸಲಾಯಿತು. ಜಾತ್ರೆಯ ಸಂಭ್ರಮಕ್ಕೆ ಗ್ರಾಮದ ಹೊರ ವಲಯದಲ್ಲಿರುವ ಜೋಡಿ ಕೆರೆಯ ತಟದಲ್ಲಿರುವ ದೇವಾಲಯದಲ್ಲಿ ಐಕನಹಳ್ಳಮ್ಮಗೆ ವಿಶೇಷ ಪೂಜೆಗಳು ನಡೆದವು.
ಸಿಡಿಹಬ್ಬವನ್ನು ಗ್ರಾಮದ ತೋಪಣ್ಣ, ಕೆಂಗಪ್ಪ, ಹುಚ್ಚಮ್ಮ, ಬುಡಿಯಪ್ಪ ವಠಾರದವರು ಸಾಂಪ್ರದಾಯಿಕವಾಗಿ ನಡೆಸುತ್ತ ಬಂದಿರುವ ಹಬ್ಬದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು.
ಹಬ್ಬದ ಕಳೆ ಹೆಚ್ಚಿಸಿದ ವೀರಮಕ್ಕಳು: ತುಳಸಿ ಗ್ರಾಮದಿಂದ ವೀರಭದ್ರೇಶ್ವರಸ್ವಾಮಿ, ಐಕನಹಳ್ಳಮ್ಮ ದೇವಿಯ ಮಕ್ಕಳು ಎನ್ನುವ ವೀರ ಮಕ್ಕಳು ಬಣ್ಣ ಬಣ್ಣದ ಉಡುಗೆ ತೊಡುಗೆ ಧರಿಸಿ ದೇಗುಲದ ಪ್ರಾಂಗಣಕ್ಕೆ ಆಗಮಿಸಿ ಕುಣಿದರು. ದೇವರಿಗೆ ಪ್ರಿಯವಾದ ದಂಡಿನ ಕೋಲು ಹಿಡಿದು ದೇವರಿಗೆ ಹರಕೆ ಸಮರ್ಪಿಸಿದರು. ಗ್ರಾಮದಲ್ಲಿ ಸುಭದ್ರವಾಗಿ ಇಟ್ಟಿದ್ದ ಒಡವೆ, ವಸ್ತ್ರಗಳನ್ನು ಮೆರವಣಿಗೆ ಮೂಲಕ ಗ್ರಾಮ ಮುಖಂಡರು ಶ್ರದ್ಧಾಭಕ್ತಿಯಿಂದ ಮಂಗಳವಾದ್ಯದೊಂದಿಗೆ ತಂದು ದೇವಿಗೆ ತೊಡಿಸಿದರು. ಉಪವಾಸ ವ್ರತವಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಹಣ್ಣು ಕಾಯಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಗುಡಿಯ ಬಳಿ ನರ್ತಿಸುತ್ತಿದ್ದ ವೀರಮಕ್ಕಳು, ದೇವರ ಭಂಟರ ಬಳಿ ಬೆತ್ತದ ಕೋಲಿನಿಂದ ತಲೆಗೆ ಮುಟ್ಟಿಸಿಕೊಂಡು ನಮಿಸಿದರು. ಹರಕೆ ಹೊತ್ತು ಹಲವು ಭಕ್ತರು ಬಾಯಿಬೀಗ ಹಾಕಿಸಿಕೊಂಡು ದೇಗುಲ ಪ್ರದಕ್ಷಿಣೆ ಹಾಕಿ, ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡರು. ಈ ಬಾರಿ ದೇಗುಲ ನವೀಕರಣದ ಸಲುವಾಗಿ ಸಿಡಿರಾಯನ ಸೇವೆ ಮೊಟಕುಗೊಳಿಸಲಾಗಿತ್ತು. ಭಕ್ತರು ಲಕ್ಷ್ಮೀದೇವಿಗೆ ಜೈಕಾರ ಹಾಕುತ್ತ ತಮ್ಮ ಹರಕೆ ಸೇವೆ, ದೀಪ, ಧೂಪ, ಆರತಿ ಸೇವೆ ಅರ್ಪಿಸಿದರು.
ಅರ್ಚಕರು, ಭಕ್ತರು ಹಣ್ಣು, ಸೇವಿಗೆ, ಕಾಯಿಹಾಲು, ಮೊಳಕೆ ಕಟ್ಟಿದ ಹುರುಳಿಕಾಳು ಸಾಂಬಾರು ನೈವೇದ್ಯವಾಗಿ ದೇವಿಗೆ ಅರ್ಪಿಸಿದರು. ಕಾಯಿ, ಸಿಹಿ ಅಡುಗೆ ನೈವೇದ್ಯ, ತೀರ್ಥ ಪ್ರಸಾದ ವಿತರಿಸಿದರು.