ಹುಮನಾಬಾದ್: ಪಟ್ಟಣದಲ್ಲಿ ಬುಧವಾರ ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಿಸಬೇಕಾದ ಸ್ಥಿತಿಗೆ ಶಾಸಕ ರಾಜಶೇಖರ ಪಾಟೀಲ್ ಹೊಣೆ ಎಂದು ಬಿಜೆಪಿ ಯುವ ಮುಖಂಡ ಡಾ.ಸಿದ್ದು ಪಾಟೀಲ್ ದೂರಿದ್ದಾರೆ.
ಜಗಳ ಮಾಡುವ ಉದ್ದೇಶದಿಂದ ಶಾಸಕರು ನನ್ನ ಹಾಗೂ ಬಿಜೆಪಿ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಜನಪ್ರತಿನಿಧಿಗಳೇ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲ್ಲೂರ್ ರಸ್ತೆಯಲ್ಲಿ ನಾನು ನಾಗೇಶ್ವರಿ ಹೋಟೆಲ್ ನಡೆಸುತ್ತಿರುವೆ. ಇದರ ಪಕ್ಕದಲ್ಲಿ ಕೆಲದಿನ ಹಿಂದೆ ಶಾಸಕರು ನಿವೇಶನ ಖರೀದಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಮ್ಯುಟೇಷನ್ ಆಗಿಲ್ಲ. ಆದರೂ ಶಾಸಕರ ಸಮ್ಮುಖದಲ್ಲಿ ಪೊಲೀಸರು, ಟೌನ್ ಪ್ಲ್ಯಾನಿಂಗ್ ಅಧಿಕಾರಿಗಳು ಅಕ್ಕಪಕ್ಕದವರಿಗೆ ನೋಟಿಸ್ ನೀಡದೆ ಬೌಂಡರಿ ಫಿಕ್ಸೇಶನ್ ಮಾಡಲು ಬಂದಿದ್ದು ಸರಿಯಲ್ಲ ಎಂದರು.
ಸ್ಥಳದಲ್ಲಿದ್ದ ನಾನು ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ನೀಡದೆ ನಿವೇಶನ ಅಳತೆ ಮಾಡುತ್ತಿರುವ ಬಗ್ಗೆ ಕೇಳುತ್ತಿದ್ದಾಗ ಶಾಸಕರು ನನ್ನ ಮೇಲೆ ಸಿಟ್ಟಿಗೆದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅವರ ಸಹೋದರರಾದ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ್ ಸಹ ಧಮ್ಕಿ ಹಾಕಿದ್ದಾರೆ ಎಂದರು.
ನಮ್ಮ ಬೆಳವಣಿಗೆ ಸಹಿಸದೆ ವಿನಕಾರಣ ಕಿರಿಕಿರಿ ತೆಗೆಯುತ್ತಿದ್ದಾರೆ. ಲಿಕ್ಕರ್ ಲಾಬಿ, ಲ್ಯಾಂಡ್ ಮಾಫಿಯಾ ನಡೆಯುತ್ತಿದೆ ಎನ್ನುತ್ತಿರುವವರು ಮದ್ಯ ಎಲ್ಲಿಂದ ಬರುತ್ತಿದೆ ಎಂಬುದನ್ನು ಅಧಿಕಾರಿಗಳಿಗೆ ಕೇಳಲಿ. ಲ್ಯಾಂಡ್ ಮಾಫಿಯಾ ಯಾರು ಮಾಡುತ್ತಿದ್ದಾರೆ ಎಂಬುದು ಬರುವ ದಿನಗಳಲ್ಲಿ ಸಾಕ್ಷಿ ಸಮೇತ ಬಹಿರಂಗಪಡಿಸುವೆ ಎಂದರು.
ಶರಣಪ್ಪ ಪಾಟೀಲ್, ಸಂತೋಷ ಪಾಟೀಲ್, ಬಾಬು ಟೈಗರ್, ಗಿರೀಶ ತುಂಬಾ ಇತರರಿದ್ದರು.