ಹುಮನಾಬಾದ್: ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸುವ ಬೇಡಿಕೆ ಮಂಡಿಸಿ ಕಪ್ಪರಗಾಂವ ಗ್ರಾಮಸ್ಥರು ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಗ್ರಾಮದ 7 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ.
ನಂದಗಾಂವ ಗ್ರಾಪಂ ವ್ಯಾಪ್ತಿಗೆ ಕಪ್ಪರಗಾಂವ ಬರುತ್ತದೆ. 18 ಸ್ಥಾನಗಳ ಪೈಕಿ ನಂದಗಾಂವ್ನಲ್ಲಿ 11, ಕಪ್ಪರಗಾಂವನಲ್ಲಿ 7 ಸ್ಥಾನಗಳಿವೆ. ಈ ಸಲ ಕಪ್ಪರಗಾಂವದ 7 ಸ್ಥಾನ ಮಹಿಳೆಯರಿಗೆ ಮೀಸಲಿರುವುದು ಆಶ್ಚರ್ಯ ಮೂಡಿಸಿದೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೇ ದಿನವಿತ್ತು. ಆದರೆ ಗ್ರಾಮದ ಒಬ್ಬರೂ ನಾಮಪತ್ರ ಸಲ್ಲಿಸದೆ ಚುನಾವಣೆಯಿಂದ ದೂರ ಉಳಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಪ್ಪರಗಾಂವ 20 ವರ್ಷದ ಹಿಂದೆ ಗ್ರಾಪಂ ಕೇಂದ್ರ ಹೊಂದಿತ್ತು. ಇದರಲ್ಲಿ ವಡ್ಡನಕೇರಾ, ಹಿಪ್ಪರಗಾ, ಮದರಗಾಂವ ಗ್ರಾಮ ಒಳಪಟ್ಟಿದ್ದವು. ಆದರೆ ನಂತರದಲ್ಲಿ ಅವೈಜ್ಞಾನಿಕವಾಗಿ ಕಪ್ಪರಗಾಂವ ಗ್ರಾಪಂ ತೆಗೆದು ನಂದಗಾಂವ ಗ್ರಾಪಂ ಮಾಡಿ ಅದರಲ್ಲಿ ಸೇರಿಸಲಾಗಿದೆ. ಗ್ರಾಪಂ ಬದಲಾವಣೆ ಮಾಡಿದ್ದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಮೊದಲಿನಂತೆ ಕಪ್ಪರಗಾಂವಗೆ ಗ್ರಾಪಂ ಕೇಂದ್ರ ಮಾಡಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಹುಡಗಿ ಗ್ರಾಮ ದಾಟಿ ನಂದಗಾಂವಗೆ ಹೋಗಬೇಕು. ಇಲ್ಲಿಂದ 10 ಕಿಮೀ ದೂರವಿದೆ. ಈವರೆಗೂ ಗ್ರಾಮದ ಯಾವೊಬ್ಬ ಸದಸ್ಯ ಗ್ರಾಪಂ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಗ್ರಾಪಂನಿಂದ ದೊರೆಯಬೇಕಾದ ಸೌಲಭ್ಯಗಳು ಸಹ ಸಿಗದೆ ಅನ್ಯಾಯವಾಗುತ್ತಿದೆ. ಗ್ರಾಮಕ್ಕೆ ಮಲತಾಯಿ ಧೋರಣೆ ಆಗುತ್ತಿದೆ. ನಮ್ಮೂರಿಗೆ ಗ್ರಾಪಂ ದರ್ಜೆ ನೀಡಲೇಬೇಕು. ಬೇಡಿಕೆ ಈಡೇರುವವರೆಗೆ ಎಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಸ್ಥಳೀಯರು ವಿಜಯವಾಣಿಗೆ ತಿಳಿಸಿದ್ದಾರೆ.