ಜಿಲ್ಲೆ

ಏಳು ಶಿಕ್ಷಕರಿಗೆ ಸೋಂಕು ತಂದ ಶಿಕ್ಷಕಿ

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರದಿಂದ ಕರೊನಾ ಆರ್ಭಟ ಎರಡಂಕಿಗೇರುತ್ತಿದ್ದು, ಭಾನುವಾರ ಒಟ್ಟು 10 ಜನರನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಇದರಿಂದ, ಜಿಲ್ಲೆಯಲ್ಲಿ ಒಟ್ಟು ಪ್ರಕರಣ 121ಕ್ಕೇರಿದ್ದು, ಅಪಾಯವನ್ನು ಸಾರಿ ಹೇಳುತ್ತಿದೆ.

ಧಾರವಾಡ ತಪೋವನದ ನಾಗಠಾಣ ಕಲ್ಯಾಣ ಮಂಟಪ ಬಳಿಯ 39 ವರ್ಷದ ಮಹಿಳೆ, ಮರಾಠಾ ಕಾಲನಿ 8ನೇ ಕ್ರಾಸ್​ನ 35 ವರ್ಷದ ಮಹಿಳೆ, ಶಿವಾಜಿ ರಸ್ತೆಯ ಕೆರೆ ಕೆಳಗಿನ ಓಣಿಯ 54 ವರ್ಷದ ಪುರುಷ, ಕಿಲ್ಲಾ ರಸ್ತೆ ಕಟ್ಟಿ ಚಾಳನ 30 ವರ್ಷದ ಮಹಿಳೆ, ಸಾಧನಕೇರಿಯ 46 ವರ್ಷದ ಮಹಿಳೆ, ಮಂಗಳವಾರಪೇಟೆ ನಗರೇಶ್ವರ ದೇವಸ್ಥಾನ ಬಳಿಯ 49 ವರ್ಷದ ಮಹಿಳೆ ಹಾಗೂ ಮಾಳಮಡ್ಡಿ ಉತ್ತರಾದಿಮಠದ ಬಳಿಯ 36 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಏಳು ಜನರು ಜೂ. 10ರಂದು ಸೋಂಕು ಕಾಣಿಸಿಕೊಂಡಿದ್ದ ಯಾಲಕ್ಕಿಶೆಟ್ಟರ ಕಾಲನಿಯ 31 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದರು.

ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ಅರವಿಂದ ನಗರದ 20 ವರ್ಷದ ಯುವಕ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವಲಗುಂದ ತಾಲೂಕು ಕೊಂಡಿಕೊಪ್ಪ ಗ್ರಾಮದ 20 ವರ್ಷದ ಯವಕನಿಗೆ ಹಾಗೂ ಜೂ. 11ರಂದು ಸೋಂಕು ದೃಢಪಟ್ಟಿದ್ದ ನವಲಗುಂದ ತಾಲೂಕು ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯಿಂದ ಅದೇ ಗ್ರಾಮದ 8 ವರ್ಷದ ಬಾಲಕಿಗೆ ಸಹ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದ್ದು ಮಾರ್ಚ್ 3ನೇ ವಾರದಲ್ಲಿ. ನಂತರ ಆಗೊಂದು ಈಗೊಂದು ಸೋಂಕಿತರು ಪತ್ತೆಯಾಗುತ್ತಿದ್ದರು. ಹೊರ ರಾಜ್ಯದಿಂದ ಬಂದ ಹಲವರಲ್ಲಿ ಸೋಂಕು ಕಾಣಿಸಿಕೊಂಡರೂ ಸಂಖ್ಯೆ ಶತಕದಿಂದ ದೂರವೇ ಇತ್ತು. ಆದರೆ, ಕಳೆದ ಮೂರೇ ದಿನದಲ್ಲಿ 49 ಜನರಲ್ಲಿ ಕರೊನಾ ಕಂಡುಬಂದಿದೆ! ಇದುವರೆಗೆ 50 ಜನ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಡಾವಣೆಗಳು ಸೀಲ್​ಡೌನ್: ಭಾನುವಾರ 10 ಪ್ರಕರಣಗಳು ಪತ್ತೆಯಾದ ವರದಿಯಾಗುತ್ತಿದ್ದಂತೆ ಪಾಲಿಕೆಯ ವಲಯ ಕಚೇರಿ ಅಧಿಕಾರಿಗಳು ಆಯಾ ಪ್ರದೇಶಗಳನ್ನು ಸೀಲ್​ಡೌನ್ ಮಾಡಿದರು. ನಗರದ ಮರಾಠಾ ಕಾಲನಿ, ಕಟ್ಟಿಚಾಳ, ಸಾಧನಕೇರಿ, ಮಂಗಳವಾರಪೇಟೆ ನಗರೇಶ್ವರ ದೇವಸ್ಥಾನ ಬಳಿ, ಮಾಳಮಡ್ಡಿ, ತಪೋವನ, ಕೆರೆ ಕೆಳಗಿನ ಓಣಿಗಳಲ್ಲಿ ಸೋಂಕು ಕಂಡ ವ್ಯಕ್ತಿಯ ಮನೆ ಸುತ್ತ 100 ಮೀ. ಅಂತರದಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ಆಯಾ ಪ್ರದೇಶಗಳನ್ನು ಬಂದ್ ಮಾಡಿ ಜನರು ಓಡಾಡದಂತೆ ಎಚ್ಚರಿಕೆ ಸಹ ನೀಡಿದರು.

ಟೀಚರ್​ನಿಂದ ಸಹೋದ್ಯೋಗಿಗಳಿಗೆ ಸಂಕಷ್ಟ!: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕಿ ಕೆಮ್ಮು, ನಗಡಿ, ಜ್ವರದಿಂದ ಬಳಲುತ್ತಿದ್ದಾಗ ಗಂಟಲ ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಜೂ. 10ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ, ಅವರ ಸಂಪರ್ಕಕ್ಕೆ ಬಂದ ಶಾಲೆಯ ಎಲ್ಲ ಶಿಕ್ಷಕರನ್ನು ಕ್ವಾರಂಟೈನ್​ಗೆ ಒಳಪಡಿಸಿ ಕಫ ಪರೀಕ್ಷೆ ಮಾಡಿಸಲಾಗಿತ್ತು. ಅವರಲ್ಲಿ 7 ಶಿಕ್ಷಕರಿಗೆ ಸೋಂಕು ತಗುಲಿದೆ ಎಂದು ಭಾನುವಾರ ದೃಢಪಟ್ಟಿದೆ. ಶಾಲೆ ಶಿಕ್ಷಕರು ಪಾಲಕರ ಸಭೆ ನಡೆಸಿ, ಶಾಲಾ ಪ್ರಾರಂಭದ ಕುರಿತು ಅನಿಸಿಕೆ ಸಂಗ್ರಹಿಸಿದ್ದರು. ಹೀಗಾಗಿ, ಆ ಸಭೆಗೆ ಹಾಜರಾಗಿದ್ದ ಪಾಲಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿ ಅನೇಕರು ಆತಂಕಕ್ಕೀಡಾಗಿದ್ದಾರೆ.

ಸ್ಥಳೀಯ ಪ್ರಕರಣಗಳು!: ಕಳೆದ 3 ದಿನಗಳಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಪ್ರಯಾಣ ಇತಿಹಾಸ ಹೊಂದಿಲ್ಲದ ಸ್ಥಳೀಯರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಕೆಮ್ಮು, ನೆಗಡಿ ಜ್ವರ ಇದ್ದವರಲ್ಲೂ ಸೋಂಕು ಕಾಣಿಸಿಕೊಂಡಿದ್ದಲ್ಲದೆ, ಇತರರಿಗೂ ಹಬ್ಬುತ್ತಿರುವುದರಿಂದ ಜನರು ಬೆಚ್ಚಿ ಬೀಳುವಂತಾಗಿದೆ. ಬಹುತೇಕ ಪ್ರಕರಣಗಳು ದ್ವಿತೀಯ ಸಂಪರ್ಕದಿಂದ ಪತ್ತೆಯಾಗಿರುವುದು ಅತ್ಯಂತ ಅಪಾಯಕಾರಿ ಹಂತದ ಸ್ಪಷ್ಟ ಮುನ್ಸೂಚನೆಯಾಗಿದೆ.

ವಿವಿಧೆಡೆ ಬಿಗಿ: ನಗರದ ವಿವಿಧ ಬಡಾವಣೆಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಓಡಾಡದಂತೆ ಜಿಲ್ಲಾಡಳಿತ ಸೀಲ್​ಡೌನ್ ಮಾಡಿದೆ. ರವಿನಗರ, ಆನಂದ ನಗರ, ನೇಕಾರನಗರ, ಕೆ.ಕೆ. ನಗರ, ಸಾಯಿನಗರ, ಉಣಕಲ್​ನ ಕೆರಿ ಓಣಿ, ನವನಗರದ ಪ್ರಜಾನಗರ ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಗಿದೆ. ಪೊಲೀಸರು, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಇಲ್ಲಿನ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಕಲ್ಪಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ನಿವಾಸಿಗಳಿಂದಲೇ ಸೀಲ್​ಡೌನ್: ಹುಬ್ಬಳ್ಳಿ ಉಣಕಲ್ ಕೆರೆ ಓಣಿಯ ಕೆಲವರಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದರಿಂದ ಸ್ಥಳೀಯ ಜನರೆಲ್ಲ ಭಯದಲ್ಲಿದ್ದಾರೆ. ಓಣಿಯ ಗಡಿ ಗುರುತಿಸಿ ಮುಳ್ಳುಬೇಲಿ ಹಾಗೂ ಚಕ್ಕಡಿಗಳನ್ನು ಅಡ್ಡಲಾಗಿ ನಿಲ್ಲಿಸಿ ಸ್ವಯಂ ಪ್ರೇರಿತರಾಗಿ ಸೀಲ್​ಡೌನ್ ಮಾಡಿಕೊಂಡಿದ್ದಾರೆ.

ಓಣಿಯ ಅಜ್ಜಿಯೊಬ್ಬರಿಗೆ ಮೊದಲು ಸೋಂಕು ಪತ್ತೆಯಾಗಿತ್ತು. ನಂತರ ಅವರ ಮನೆಯಲ್ಲಿ ನಾಲ್ವರು ಮಕ್ಕಳು ಸಮೇತ 7 ಜನರಿಗೆ ಸೋಂಕು ದೃಢಪಟ್ಟಿದೆ. ಸುತ್ತಲಿನ 5-6 ಮನೆಗಳ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕು ಪತ್ತೆಯಾಗುತ್ತಿದ್ದಂತೆ ಪೊಲೀಸರು, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೀಲ್​ಡೌನ್ ಪ್ರದೇಶಕ್ಕೆ ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರು. ಈಗೀಗ ಜಿಲ್ಲಾಡಳಿತದಿಂದ ತಡವಾಗಿ ಆದೇಶ ಹೊರಡಿಸಲಾಗುತ್ತಿದೆ.

ಹಾಗಾಗಿಯೇ ಜನರು ಸ್ವಯಂ ಪ್ರೇರಿತರಾಗಿ ಸಂರಕ್ಷಣೆಗೆ ಮುಂದಾಗಿದ್ದಾರೆ. ಓಣಿಯ ಗಡಿ ಭಾಗದಲ್ಲಿ ಮುಳ್ಳುಬೇಲಿ ಹಾಗೂ ಚಕ್ಕಡಿಗಳನ್ನು ನಿಲ್ಲಿಸಿ ಸೀಲ್​ಡೌನ್ ಪ್ರದೇಶದ ಜನರು ಹೊರಗಡೆ ಹೋಗುವಂತಿಲ್ಲ ಹಾಗೂ ಹೊರಗಿನವರು ಒಳಗಡೆ ಬರದಂತೆ ಎಚ್ಚರ ವಹಿಸಿದ್ದಾರೆ. ಅಪರಿಚಿತರು ಬಂದರೆ ತಿಳಿಹೇಳಿ ಕಳುಹಿಸುತ್ತಿದ್ದಾರೆ.

ಸಂತೆ ನಡೆಸದಿರಲು ನಿರ್ಧಾರ: ಉಣಕಲ್ ಸಿದ್ದಪ್ಪಜ್ಜನ ಗುಡಿ ಹತ್ತಿರ ಸಂಜೆ ಸಂತೆ ಮಾರುಕಟ್ಟೆ ನಡೆಯುತ್ತದೆ. ಆದರೆ, ಇಲ್ಲಿಗೆ ತರಕಾರಿ ತಂದಿಟ್ಟು ಮಾರುವ ಬಹುತೇಕರು ಉಣಕಲ್​ನವರು. ಸಂತೆ ಮಾರುಕಟ್ಟೆ ಮಾಡಿ ಜನರಿಗೆ ಸೋಂಕು ತರುವುದು ಬೇಡವೆಂದು ನಿವಾಸಿಗಳು ತಿಳಿಹೇಳಿದ್ದಾರೆ. ಹಾಗಾಗಿ ಸಂಜೆ ಸಂತೆ ಮಾರುಕಟ್ಟೆ ಮಾಡದಿರಲು ನಿರ್ಧರಿಸಲಾಗಿದೆ.

ಮೂವರು ಪೊಲೀಸರಿಗೆ ಹೋಂ ಕ್ವಾರಂಟೈನ್: ಕರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಇಬ್ಬರು ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಒಬ್ಬರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಹುಬ್ಬಳ್ಳಿಯ ಮಠವೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುವುದಾಗಿ ಯಾರೋ ಸುಳ್ಳು ಹೇಳಿ ದಾವಣಗೆರೆ ಮೂಲದ 72 ವರ್ಷದ ವೃದ್ಧೆಯೊಬ್ಬರನ್ನು ಹುಬ್ಬಳ್ಳಿಯ ಬಸ್ ಹತ್ತಿಸಿ ಕಳುಹಿಸಿದ್ದರು. ಇಲ್ಲಿಗೆ ಬಂದಿಳಿದ ಅಜ್ಜಿ, ವೀರಾಪುರ ಓಣಿಯ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದರು. ಅಪರಿಚಿತ ವೃದ್ಧೆಯನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವಂತೆ ಸ್ಥಳೀಯರು ಬೆಂಡಿಗೇರಿ ಪೊಲೀಸರಿಗೆ ಒತ್ತಾಯಿಸಿದ್ದರು.

ಮೇ 28ರಂದು ಅಜ್ಜಿಯನ್ನು ಬೆಂಡಿಗೇರಿ ಠಾಣೆಯ ಮಹಿಳಾ ಪಿಎಸ್​ಐ, ಎಎಸ್​ಐ ಆಟೋ ಮೂಲಕ ಕರೆತಂದು ಬೆಂಡಿಗೇರಿ ಠಾಣೆ ಬಳಿಯ ಬಿಸಿಎಂ ಹಾಸ್ಟೆಲ್​ನ ನಿರಾಶ್ರಿತರ ಕೇಂದ್ರದಲ್ಲಿ ಬಿಟ್ಟಿದ್ದರು. ಆ ಅಜ್ಜಿಯ ಹಾಗೂ ಜತೆಗಿದ್ದ ಮತ್ತೊಬ್ಬನ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಇಬ್ಬರ ವರದಿಯೂ ಪಾಸಿಟಿವ್ ಬಂದಿದೆ. ಹಾಗಾಗಿ, ಬೆಂಡಿಗೇರಿಯ ಇಬ್ಬರು ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್ ಮಾಡಲಾಗಿದೆ.

ಆನಂದ ನಗರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನಸ್ಟೇಬಲ್ ಒಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

50 ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ: ಮುಂಜಾಗ್ರತೆ ಕ್ರಮವಾಗಿ ಬೆಂಡಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸೇರಿ ಠಾಣೆಯ 50ಕ್ಕೂ ಹೆಚ್ಚು ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ಮಾಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶಾಸಕರ ಸೂಚನೆ: ಕರೊನಾ ಪಾಸಿಟಿವ್ ಆಗಿರುವ ಕಲಘಟಗಿ ತಾಲೂಕಿನ ದೇವಿಕೊಪ್ಪ, ಬಿ. ಗುಡಿಹಾಳ ಗ್ರಾಮಗಳ ಸೀಲ್​ಡೌನ್ ಪ್ರದೇಶಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಗ್ರಾಮಗಳಲ್ಲಿ ತೀವ್ರ ನಿಗಾ ವಹಿಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಸೀಲ್​ಡೌನ್ ಪ್ರದೇಶ ಸೇರಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸೋಡಿಯಂ ದ್ರಾವಣ ಸಿಂಪಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ, ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು ಪೂರೈಸುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಸಿಪಿಐ ವಿಜಯ ಬಿರಾದಾರ, ಇನ್ಸಿಡೆಂಟ್ ಕಮಾಂಡರ್​ಗಳಾದ ಕುಮಾರ್ ಕೆ.ಎಫ್., ಫರೀದ್ ರೇಶ್ಮಿ, ಗುರುಸಿದ್ದ ಟೊಂಗಳೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸಿ.ಎಸ್. ಉಳ್ಳಾಗಡ್ಡಿ, ಎಚ್. ಶರಣಬಸಪ್ಪ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿ ಇದ್ದರು.

ನಾಗರಿಕರಿಗೆ ಧೈರ್ಯ ತುಂಬಿದ ಶಾಸಕ ಮುನೇನಕೊಪ್ಪ: ಅಣ್ಣಿಗೇರಿ ಪಟ್ಟಣದ ಹಳೇ ಅಮೃತೇಶ್ವರ ನಗರದಲ್ಲಿ ಜೂ. 10ರಂದು ನಾಲ್ಕು ಕರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾನುವಾರ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬಿದರು.

‘ಕರೊನಾ ಪ್ರಕರಣಗಳು ಪತ್ತೆಯಾದ ಸ್ಥಳವನ್ನು ಸೀಲ್​ಡೌನ್ ಮಾಡಿದ್ದು, ಅಲ್ಲಿನ ಜನರಿಗೆ ತಾಲೂಕಾಡಳಿತ ಸೌಕರ್ಯಗಳನ್ನು ಒದಗಿಸಲಿದೆ. ಜನರು ಯಾವುದಕ್ಕೂ ಹೆದರಬಾರದು. ಜಿಲ್ಲಾಡಳಿತ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ. ನಿಮ್ಮ ತೊಂದರೆಗಳ ನಿವಾರಣೆಗೆ ತಾಲೂಕಾಡಳಿತ ಸದಾ ಸಿದ್ಧವಿದೆ’ ಎಂದು ಶಾಸಕರು ಹೇಳಿದರು.

ತಹಸೀಲ್ದಾರ್ ಕೊಟ್ರೇಶ ಗಾಳಿ, ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಪಿಎಸ್​ಐ ಲಾಲಸಾಬ್ ಜೂಲಕಟ್ಟಿ, ಷಣ್ಮುಖ ಗುರಿಕಾರ, ಶರಣಪ್ಪಗೌಡ ದಾನಪ್ಪಗೌಡರ, ರಿಷಿಕುಮಾರ ಸಾರಂಗಿ, ಇತರರಿದ್ದರು.

ಕ್ರೖೆಸ್ತ ದೇವಾಲಯಗಳಲ್ಲಿ ಪ್ರಾರ್ಥನೆ: ಲಾಕ್​ಡೌನ್ ಹಿನ್ನೆಲೆಯಲ್ಲಿ 83 ದಿನಗಳಿಂದ ಬಾಗಿಲು ಮುಚ್ಚಿದ್ದ ಧಾರವಾಡ ನಗರದ ಹೆಬಿಕ್ ಸ್ಮಾರಕ ದೇವಾಯದಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಿಷಪ್ ಆದೇಶದ ಮೇರೆಗೆ ವಿಶೇಷ ಕೃತಜ್ಞತಾ ಆರಾಧನೆ ನಡೆಸಲಾಯಿತು. ಸರ್ಕಾರದ ಮಾರ್ಗದರ್ಶನದಂತೆ ದೇವಾಲಯದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಎಲ್ಲ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಕರೊನಾ ಸೋಂಕಿತರು ಹಾಗೂ ಕರೊನಾ ಸೈನಿಕರಿಗಾಗಿ ರೆ. ಎಸ್.ಎಸ್. ಸಕ್ಕರಿ ಹಾಗೂ ರೆ. ಜಿ. ನಂದಕುಮಾರ ಅವರು ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು. 65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಅವಕಾಶ ನೀಡದೆ, ಅವರಿಗಾಗಿ ಸಾಮಾಜಿಕ ಜಾಲ ತಾಣಗಳ ಮೂಲಕವೇ ಆರಾಧನೆಯ ನೇರ ಪ್ರಸಾರ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ ಉತ್ತರ ಸಭಾ ಪ್ರಾಂತದ ಅಡಿಯಲ್ಲಿನ 11 ಜಿಲ್ಲೆಗಳ ಎಲ್ಲ ಕ್ರೖೆಸ್ತ ದೇವಾಲಯಗಳಲ್ಲಿ ಬಿಷಪ್ ರೈಟ್ ರೆ. ರವಿಕುಮಾರ ಜೆ. ನಿರಂಜನ ಆದೇಶದಂತೆ ಎಲ್ಲ ದೇವಾಲಯಗಳ ಬಾಗಿಲುಗಳು ತೆರೆದವು.