ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ ಏಳು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಕೇಂದ್ರದ ರಾ.ಹೆ. ಸಚಿವ ನಿತಿನ್‌ಗಡ್ಕರಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಗುರುವಾರ ಸಂಸದ ಗೋವಿಂದ ಎಂ.ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಗತಿಯಲ್ಲಿರುವ ಹೆದ್ದಾರಿಗಳ ಪೈಕಿ 1167.52 ಕೋಟಿ ರೂ. ಮೊತ್ತದ ಚಳ್ಳಕೆರೆ-ಹಿರಿಯೂರು ಮಧ್ಯದ ರಾ.ಹೆ. ಯನ್ನು 4 ಪಥಗಳನ್ನಾಗಿ ಮಾಡುವ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದೆ.
ರಾ.ಹೆ.173ನ್ನು ಹೊಸದುರ್ಗ-ಹೊಳಲ್ಕೆರೆ ಭಾಗದಲ್ಲಿ ದ್ವಿಪಥ ಹೆದ್ದಾರಿಯನ್ನಾಗಿ ಮಾಡುವ 109 ಕೋಟಿ ರೂ.ಮೊತ್ತದ ಕೆಲಸ ಶೇ. 92, ರಾ.ಹೆ.150-ಎ ಅನ್ನು ಹಿರಿಯೂರು-ಹುಳಿಯಾರು ಭಾಗದಲ್ಲಿ ದ್ವಿಪಥ ಹೆದ್ದಾರಿಯನ್ನಾಗಿ ಮಾಡುವ 107 ಕೋಟಿ ರೂ.ಮೊತ್ತದ ಕೆಲಸ ಶೇ.97 ಪೂರ್ಣಗೊಂಡಿದೆ.
ರಾ.ಹೆ.173ನ್ನು ಕಡೂರು-ಹೊಸದುರ್ಗ ಭಾಗದಲ್ಲಿ ದ್ವಿಪಥ ಮಾಡುವ 184 ಕೋಟಿ ರೂ.ಮೊತ್ತದ ಕಾಮಗಾರಿ ಶೇ.13ರಷ್ಟು ಪೂರ್ಣಗೊಂಡಿದೆ. ರಾ.ಹೆ.13ರಲ್ಲಿ ಚಿತ್ರದುರ್ಗದಿಂದ ಶಿವಮೊಗ್ಗ ನಡುವೆ ದ್ವಿಪಥವನ್ನಾಗಿ ಮಾಡಲು ಬಾಕಿ ಉಳಿದ 516 ಕೋಟಿ ರೂ. ಮೊತ್ತದ ಕೆಲಸದಲ್ಲಿ ಶೇ.75 ಪೂರ್ಣಗೊಂಡಿದೆ.
ರಾ.ಹೆ.69ನ್ನು ಶಿರಾ ಪಟ್ಟಣದ ಸಮೀಪ ಬೈಪಾಸ್ ರಸ್ತೆ ನಿರ್ಮಾಣಕ್ಕೆ 584 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಎಲ್ಲ ಯೋಜನೆಗಳ ಪ್ರಗತಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಉತ್ತರಿಸಿರುವ ಸಚಿವರು, ನಿಗದಿತ ಅವಧಿಯೊಳಗೆ ತ್ವರಿತವಾಗಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀ ಡಿದ್ದಾರೆ.
---